ವಿಜಯವಾಡ: ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಇಂದು ಪದಗ್ರಹಣ ಮಾಡಿದರು. ರಾಜ್ಯಪಾಲ ಅಬ್ದುಲ್ ನಜೀರ್ ಪ್ರಮಾಣ ವಚನ ಬೋಧಿಸಿದರು.
ಚಂದ್ರಬಾಬು ನಾಯ್ಡು ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದರು. ಮೆಗಾಸ್ಟಾರ್ ಚಿರಂಜೀವಿ, ತಲೈವಾ ರಜನೀಕಾಂತ್, ರಾಮ್ ಚರಣ್ ತೇಜ ಸೇರಿದಂತೆ ತಾರೆಯರ ದಂಡೇ ಹರಿದುಬಂದಿತ್ತು. ಹೀಗಾಗಿ ಬಿಗಿ ಭದ್ರತೆ ಒದಗಿಸಲಾಗಿತ್ತು.
ಇಂದು ಚಂದ್ರಬಾಬು ನಾಯ್ಡು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರೆ ಅವರ ಜೊತೆಗೆ ಜನಸೇನಾ ನಾಯಕ, ನಟ ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು ಪುತ್ರ ನರಾ ಲೋಕೇಶ್ ಸೇರಿದಂತೆ 22 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿ ವಿಧಾನಸಭೆಯಲ್ಲಿ ಟಿಡಿಪಿ ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಜಂಟಿಯಾಗಿ ಹೋರಾಟ ನಡೆಸಿತ್ತು. ಒಟ್ಟು 175 ಸದಸ್ಯ ಬಲವುಳ್ಳ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಟಿಡಿಪಿ 135 ಸ್ಥಾನ ಗೆದ್ದು ಸಂಪೂರ್ಣ ಬಹುಮತ ಪಡೆದಿತ್ತು
ಕೇಂದ್ರದಲ್ಲಿ ಈ ಬಾರಿ ಟಿಡಿಪಿ ಸಹಾಯದೊಂದಿಗೇ ಬಿಜೆಪಿ ಸರ್ಕಾರ ರಚಿಸಿದೆ. ಹೀಗಾಗಿ ಇಂದಿನ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಕೇಂದ್ರದ ಘಟಾನುಘಟಿ ನಾಯಕರು ಭಾಗಿಯಾಗಿದ್ದರು. ಚಂದ್ರಬಾಬು ನಾಯ್ಡು ಪ್ರಮಾಣ ವಚನದ ಬಳಿಕ ಪ್ರಧಾನಿ ಮೋದಿಯನ್ನು ವೇದಿಕೆಯಲ್ಲಿ ತಬ್ಬಿ ಅಭಿನಂದಿಸಿದ್ದು ಎಲ್ಲರ ಗಮನ ಸೆಳೆಯಿತು.