Publish Date: Wed, 12 Jun 2024 (12:22 IST)
Updated Date: Wed, 12 Jun 2024 (12:25 IST)
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಭಾರೀ ಅಂತರದಿಂದ ಗೆದ್ದು ಕೇಂದ್ರದಲ್ಲಿ ಸಚಿವರಾಗಿರುವ ಎಚ್ ಡಿ ಕುಮಾರಸ್ವಾಮಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಡಿಕೆ ಸುರೇಶ್ ಬಾಂಬ್ ಸಿಡಿಸಿದ್ದಾರೆ.
ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಮಾಜಿ ಸಂಸದ ಡಿಕೆ ಸುರೇಶ್ ಚನ್ನಪಟ್ಟಣ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅದನ್ನು ಅವರು ತಳ್ಳಿ ಹಾಕಿದ್ದರು. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಶಾಸಕರಾಗಿದ್ದರು. ಆದರೆ ಅವರೀಗ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿರುವುದರಿಂದ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ.
ಆದರೆ ಇದುವರೆಗೆ ತಮ್ಮ ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿಲ್ಲ. ಹೀಗಾಗಿ ಡಿಕೆ ಸುರೇಶ್, ಕುಮಾರಸ್ವಾಮಿ ಮಂಡ್ಯ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಬಹುಶಃ ಅವರಿಗೆ ಚನ್ನಪಟ್ಟಣ ಬಿಡುವ ಮನಸ್ಸಿಲ್ಲ. ಹೀಗಾಗಿ ಮಂಡ್ಯ ಸಂಸದ ಸ್ಥಾನಕ್ಕೇ ರಾಜೀನಾಮೆ ನೀಡಲಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಕುಮಾರಸ್ವಾಮಿಯವರ ಅನೇಕ ಭಾಷಣಗಳನ್ನು ನಾನು ಕೇಳಿದ್ದೇನೆ. ಅವರು ಯಾವಾಗಲೂ ಚನ್ನಪಟ್ಟಣ ನನಗೆ ತವರಿದ್ದಂತೆ ಹೇಳುತ್ತಿದ್ದರು. ಹೀಗಾಗಿ ಈ ಕ್ಷೇತ್ರವನ್ನು ಬಿಡಲು ಅವರಿಗೆ ಮನಸ್ಸಿಲ್ಲ. ಹೀಗಾಗಿ ಮಂಡ್ಯ ಎಂಪಿ ಸ್ಥಾನಕ್ಕೇ ರಾಜೀನಾಮೆ ನೀಡಬಹುದು ಎಂದು ಸುರೇಶ್ ಟಾಂಗ್ ಕೊಟ್ಟಿದ್ದಾರೆ.