Publish Date: Sun, 09 Jun 2024 (19:53 IST)
Updated Date: Sun, 09 Jun 2024 (19:56 IST)
ನವದೆಹಲಿ: ನೂತನ ಎನ್ ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಜೆಡಿಎಸ್ ನಾಯಕ, ಕರ್ನಾಟಕದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ ವೇಳೆ ಕನ್ನಡದಲ್ಲೇ ಜೈಕಾರ ಮೊಳಗಿತು.
ಇಂದು ಮೋದಿ ಸಂಪುಟಕ್ಕೆ ಕುಮಾರಸ್ವಾಮಿ ಕೂಡಾ ಕ್ಯಾಬಿನೆಟ್ ಸಚಿವರಾಗಿ ಸೇರ್ಪಡೆಯಾದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಘಟಾನುಘಟಿ ನಾಯಕರೊಂದಿಗೆ ಮೊದಲ ಸಾಲಿನಲ್ಲೇ ಕೂತಿದ್ದ ಕುಮಾರಸ್ವಾಮಿ ಆಂಗ್ಲ ಭಾಷೆಯಲ್ಲಿ ಪ್ರಮಾಣ ವಚನ ಓದಿದರು.
ಬಿಳಿ ಶರ್ಟ್, ಪಂಚೆಯುಟ್ಟು ಬಂದಿದ್ದ ಕುಮಾರಸ್ವಾಮಿಯವರ ಹೆಸರನ್ನು ಕರೆದಾಗ ಅವರು ಪ್ರಮಾಣ ಸ್ವೀಕರಿಸಲು ಬರುತ್ತಿದ್ದಂತೇ ನೆರೆದಿದ್ದವರಿಂದ ಕುಮಾರಸ್ವಾಮಿಯವರಿಗೇ ಜೈ ಎಂದು ಕನ್ನಡದಲ್ಲೇ ಕೆಲವರು ಜೈಕಾರ ಘೋಷಿಸಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ, ನಿತಿನ್ ಗಡ್ಕರಿ, ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಬಿಟ್ಟರೆ ಕುಮಾರಸ್ವಾಮಿ ವೇದಿಕೆಗೆ ಬಂದಾಗ ಭಾರೀ ಜೈಕಾರ ಕೇಳಿಬಂದಿದ್ದು ವಿಶೇಷವಾಗಿತ್ತು.
ಇಷ್ಟು ದಿನ ರಾಜ್ಯ ರಾಜಕಾರಣದಲ್ಲಿದ್ದ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ಕೇಂದ್ರದಲ್ಲಿ ಮಂತ್ರಿಯಾಗುವ ಅವರ ಬಹು ದಿನದ ಕನಸು ನನಸಾಗಿದೆ.