ಕೋಲ್ಕತ್ತಾ: ಪಶ್ಚಿಮ ಬಂಗಾದಲ್ಲಿ ಹಿಂದೂಗಳ ಮಾರಣ ಹೋಮವಾಗ್ತಿದ್ದರೆ ಇತ್ತ ಟಿಎಂಸಿ ಸಂಸದ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಕೂಲ್ ಆಗಿ ಟೀ ಕುಡಿಯುತ್ತಾ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಕೇಶವನ್ ಆರೋಪಿಸಿದ್ದಾರೆ.
ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಪಶ್ಚಿಮ ಬಂಗಾಲದಲ್ಲಿ ಮುಸ್ಲಿಮರಿಂದ ಭಾರೀ ಪ್ರತಿಭಟನೆ ನಡೆಯುತ್ತಿದ್ದು ಹಿಂಸಾರೂಪಕ್ಕೆ ತಿರುಗಿದೆ. ಮುರ್ಷಿದಾಬಾದ್ ನಲ್ಲಂತೂ ಹಿಂದೂಗಳ ಮೇಲೆ ದಾಳಿಯಾಗುತ್ತಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಕೇಶವನ್ ಮಮತಾ ಬ್ಯಾನರ್ಜಿಯವರ ಓಲೈಕೆ ರಾಜಕಾರಣದ ಪರಿಣಾಮ ಇಂದು ಪಶ್ಚಿಮ ಬಂಗಾಲ ಮತ್ತೊಂದು ಜಲಿಯನ್ ವಾಲಾಭಾಗ್ ಆಗಿದೆ. ಮುರ್ಷಿದಾಬಾದ್ ನಲ್ಲಿ ಹಿಂದೂಗಳ ಮೇಲೆ ಹಲ್ಲೆ, ಕೊಲೆಯಾಗುತ್ತಿದ್ದರೆ ಟಿಎಂಸಿ ಸಂಸದ ಯೂಸುಫ್ ಪಠಾಣ್ ಟೀ ಕುಡಿಯುತ್ತಾ ಕೂಲ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ ಕೂತಿದ್ದಾರೆ. ಮಮತಾ ಬ್ಯಾನರ್ಜಿಯವರ ಆಧಾರರಹಿತ ವಕ್ಫ್ ವಿರೋಧಿ ನಡೆ ಬಾಬಾ ಸಾಹೇಬ್ ಅಂಬೇಡ್ಕರ್ ತತ್ವಗಳಿಗೇ ವಿರುದ್ಧವಾಗಿದೆ. ನೂರಾರು ಹಿಂದೂಗಳು ಸ್ಥಳದಿಂದ ಓಡಿ ಹೋಗುತ್ತಿರುವುದನ್ನು ನೋಡಿದ್ದೇವೆ. ಇದಕ್ಕೆಲ್ಲಾ ಮಮತಾ ಬ್ಯಾನರ್ಜಿ ಮೂಕ ಸಾಕ್ಷಿಯಾಗಿದ್ದಾರೆ.
ಕಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶಿಸಿ ಸ್ಥಳದಲ್ಲಿ ಕೇಂದ್ರ ಭದ್ರತಾ ದಳಗಳ ಸಿಬ್ಬಂದಿಗಳನ್ನು ನಿಯೋಜಿಸಿ ಸುರಕ್ಷತೆ ಕ್ರಮ ಕೈಗೊಳ್ಳುತ್ತಿದೆ. ಇದು ನಮಗೆ ಆರ್ ಜಿ ಕರ್ ಆಸ್ಪತ್ರೆಯ ಘಟನೆಯನ್ನು ನೆನಪಿಸುತ್ತದೆ. ಮಮತಾ ಬ್ಯಾನರ್ಜಿ ಮುಂದಿನ ಚುನಾವಣೆಯಲ್ಲಿ ಇದಕ್ಕೆ ತಕ್ಕ ಪಾಠ ಕಲಿಯಲಿದ್ದಾರೆ ಎಂದು ಕೇಶವನ್ ಆರೋಪಿಸಿದ್ದಾರೆ.