ಚೆನ್ನೈ : ವೈರಲ್ ವಿಡಿಯೋದಲ್ಲಿ ಕ್ರೂರಿ ತಾಯಿ ತನ್ನ ಮಗುವನ್ನು ಅಮಾನುಷವಾಗಿ ಹಿಂಸಿಸಿ, ಕೊನೆಗೆ ಅರೆಸ್ಟ್ ಆದ ಪ್ರಕರಣ ಕಣ್ಣ ಮುಂದೆ ಇರುವಾಗಲೇ ಮತ್ತೊಂದು ಅಘಾತಕಾರಿ ಪ್ರಕರಣ ಚೆನ್ನೈನಲ್ಲಿ ದಾಖಲಾಗಿದೆ. ಅಂಗಡಿಯಲ್ಲಿ ಖರೀದಿಸಿದ ವಸ್ತುಗಳಿಗೆ ಹಣ ನೀಡುವ ಬದಲು ತಮ್ಮ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಲು ಅಂಗಡಿ ಮಾಲೀಕನಿಗೆ ತಾಯಂದಿರೇ ಅನುಮತಿ ನೀಡಿರುವ ಅತಿದಾರುಣ ಘಟನೆ ಬೆಳಕಿಗೆ ಬಂದಿದೆ.
ಅಕ್ಕ-ತಂಗಿಯರಿಬ್ಬರು ಅಂಗಡಿ ಮಾಲೀಕನಿಗೆ ಹಣ ಕೊಡುವ ಬದಲು ತಮ್ಮ ಮಕ್ಕಳ ಮೇಲೆ ಅತ್ಯಾಚಾರವೆಸಗಿ, ಅದನ್ನು ವಿಡಿಯೋ ಮಾಡಲು ಅನುಮತಿ ನೀಡಿದ್ದರು ಎಂಬ ಸಂಗತಿ ಬಯಲಾಗಿದೆ.
ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೆರುಮಾಳ್ (48) ಎಂಬಾತನ ಅಂಗಡಿಯ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಆಗ ಅಪ್ರಾಪ್ತೆಯರನ್ನು ರೇಪ್ ಮಾಡಿ ವಿಡಿಯೋ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ದಾಳಿಯ ಸಮಯದಲ್ಲಿ ತಂಬಾಕು ವಸ್ತುಗಳ ಚೀಲ ಮತ್ತು ಅಂಗಡಿಯವನ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಂಬಾಕು ವಸ್ತುಗಳ ವಿತರಕರ ವಿವರಗಳನ್ನು ಪಡೆಯಲು ಅಂಗಡಿಯವನ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ಪೊಲೀಸರು ಆಘಾತಕ್ಕೊಳಗಾದರು.
ಅಂಗಡಿ ಮಾಲೀಕನ ಫೋಟೋ ಗ್ಯಾಲರಿಯಲ್ಲಿ ಸುಮಾರು 50 ವೀಡಿಯೊಗಳು ಸಿಕ್ಕಿವೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ವಿಡಿಯೋಗಳಿಂದ ತಿಳಿದು ಬಂದಿದೆ. ಮೊದಲು ಅಂಗಡಿಯವನು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಡೌನ್ಲೋಡ್ ಮಾಡಿದ್ದಾನೆ ಎಂದೇ ಪೊಲೀಸರು ಭಾವಿಸಿದ್ದರು. ಆದರೆ ವಿಡಿಯೋದ ಕ್ಲಿಪ್ಗಳಲ್ಲಿ ಕಾಣುವ ವ್ಯಕ್ತಿ ಪೆರುಮಾಳ್ ಎಂಬುದು ಗೊತ್ತಾಗಿ ಪೊಲೀಸರಿಗೆ ಶಾಕ್ ಆಗಿದೆ.
ನಂತರ ಪೆರುಮಾಳ್ನನ್ನು ಪೊಲೀಸರು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಸುಮಾರು ಆರು ತಿಂಗಳಿನಿಂದ ಐದು ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದೇನೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಜೊತೆಗೆ ಈತನ ಅನಾಚಾರಕ್ಕೆ ವಿಡಿಯೋದಲ್ಲಿ ಕಾಣುವ ಬಾಲಕಿಯರ ತಾಯಂದಿರೇ ಬೆಂಬಲ ನೀಡಿದ್ದಾರೆ ಎಂಬ ಮತ್ತಷ್ಟು ಅಘಾತಕಾರಿ ವಿಷಯ ಪೊಲೀಸರಿಗೆ ಗೊತ್ತಾಗಿದೆ.
30 ಮತ್ತು 28 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಈ ಅಪರಾಧದಲ್ಲಿ ಭಾಗಿಯಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಅವರಲ್ಲಿ ಒಬ್ಬಾಕೆ ಅಂಗಡಿಯವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಅಂಗಡಿಯಿಂದ ಖರೀದಿಸಿದ ವಸ್ತುಗಳಿಗೆ ಹಣ ಕೊಡುವ ಬದಲು ತಮ್ಮ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಅನುಮತಿ ನೀಡಿದ್ದರು. ಈ ಘೋರ ಅಪರಾಧವನ್ನು ಚಿತ್ರೀಕರಿಸಲು ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು
ಈ ಅಕ್ಕ-ತಂಗಿಯ ಮಕ್ಕಳ ಜೊತೆ ಆಟವಾಡಲು ಬರುತ್ತಿದ್ದ ಇನ್ನು ಮೂವರು ಬಾಲಕಿಯರು ಕೂಡ ಅಂಗಡಿಯವನಿಂದ ಪದೇ ಪದೇ ಅತ್ಯಾಚಾರಕ್ಕೊಳಗಾಗಿದ್ದಾರೆ. ಈ ಮೂವರು ಮಕ್ಕಳು ತುಂಬಾ ಚಿಕ್ಕವರಾಗಿದ್ದು, ತಮ್ಮ ಹೆತ್ತವರಿಗೆ ಏನಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಇನ್ಸ್ಪೆಕ್ಟರ್ ಅಂಗಡಿ ಮಾಲೀಕನ ಮೊಬೈಲ್ ಫೋನ್ ಅನ್ನು ಪರಿಶೀಲಿಸದಿದ್ದರೆ, ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ. ಕಾಮುಕ ಮತ್ತಷ್ಟು ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದನು ಎಂದು ಪೊಲೀಸ್ ಉಪ ಆಯುಕ್ತ ಕಾರ್ತಿಕೇಯನ್ ತಿಳಿಸಿದ್ದಾರೆ.