ನವದೆಹಲಿ: ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮೂರು ದಿನಗಳ ಮಾಲ್ದೀವ್ಸ್ ಪ್ರವಾಸ ಕೈಗೊಳ್ಳುವ ಮೂಲಕ ಭಾರತ–ಮಾಲ್ಡೀವ್ಸ್ ಮುನಿಸಿಗೆ ವಿರಾಮ ಹಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಈಚೆಗೆ ಮಾಲ್ದೀವ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರು ಭಾರತ ಪ್ರವಾಸ ಕೈಗೊಂಡು ಉಭಯ ರಾಷ್ಟ್ರಗಳ ಬಾಂಧವ್ಯ ಕುರಿತು ಚರ್ಚೆ ಮಾಡಿದ ಬೆನ್ನಲ್ಲೇ ಇದೀಗ ಜೈಶಂಕರ್ ಅವರು ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆ ನಂತರ ಭಾರತ ಹಾಗೂ ಮಾಲ್ದೀವ್ಸ್ ನಡುವಿನ ಜಗಳ ಜೋರಾಗುತ್ತಲೇ ಹೋಯಿತು. ಇದರ ಬಿಸಿಯಿಂದ ಮಾಲ್ಡೀವ್ಸ್ ಹೇಳಿಕೆ ನೀಡಿದ್ದ ಮೂರು ಸಚಿವರನ್ನು ವಜಾಗೊಳಿಸಿತ್ತು. ಇದಾದ ಬೆನ್ನಲ್ಲೇ ಮಾಲ್ದೀವ್ಸ್‌ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ದಕ್ಷಿಣ ಏಷ್ಯಾದ ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ಭಾರತ ಕ್ರಮ ಕೈಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರೂ ಭೇಟಿ ನೀಡಿದರು.
ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಮುಯಿಝು ಅವರಿಗೂ ಭಾರತ ಆಹ್ವಾನ ನೀಡಿತ್ತು. ಈ ಸಮಾರಂಭದಲ್ಲಿ ಮುಯಿಝು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲೂ ಪಾಲ್ಗೊಂಡಿದ್ದರು.
ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೂ ಮುಯಿಝು ಮಾತುಕತೆ ನಡೆಸಿ, ಉಭಯ ರಾಷ್ಟ್ರಗಳು ಒಗ್ಗೂಡಿ ಕಾರ್ಯನಿರ್ವಹಿಸಲು ಮುಂದೆ ಬಂದಿವೆ ಎಂದಿದ್ದರು. ಈ ಮೂಲಕ ಮತ್ತೇ ಭಾರತ ಮಾಲ್ಡೀವ್ಸ್ ಸಂಬಂಧ ಸರಿ ಹೋಗಬಹುದು ಎಂದು ನಿರೀಕ್ಷಿಸಬಹುದು.