ಲಕ್ನೋ: ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಅಭಿವೃದ್ಧಿ ವಿಚಾರದಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿಯನ್ನು ಮಹಿಳೆ ಗಂಡನ ಎದುರು ಹಾಡಿ ಹೊಗಳಿದ್ದಳು. ಇದು ಗಂಡನನ್ನು ಸಿಟ್ಟಿಗೆಬ್ಬಿಸಿತ್ತು. ಈ ಕಾರಣಕ್ಕೆ ಪತ್ನಿ ನಿಂತ ನಿಲುವಿನಲ್ಲೇ ತಲಾಖ್ ನೀಡಿದ್ದ. ಇದರ ವಿರುದ್ಧ ಪತ್ನಿ ಈಗ ಪೊಲೀಸರಿಗೆ ದೂರು ನೀಡಿದ್ದಾಳೆ.
ಈ ಸಂಬಂಧ ಪೊಲೀಸರು ಪತಿ ಮಹಾಶಯನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಮೋದಿ ಸರ್ಕಾರ ಈಗಾಗಲೇ ತ್ರಿವಳಿ ತಲಾಖ್ ನಿಷೇಧಿಸಿತ್ತು. ಈಗ ಈ ರೀತಿ ತಲಾಖ್ ನೀಡುವುದು ಕಾನೂನು ರೀತ್ಯಾ ಅಪರಾಧವಾಗಿದೆ. ಈಗ ಪತ್ನಿಗೆ ಕ್ಷುಲ್ಲುಕ ಕಾರಣಕ್ಕೆ ತಲಾಖ್ ನೀಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಮಹಿಳೆ ತನ್ನ ಗಂಡ ಮತ್ತು ಮನೆಯವರು ನೀಡುತ್ತಿದ್ದ ಹಿಂಸಾಚಾರದ ಬಗ್ಗೆ ವಿವರಿಸಿದ್ದಾಳೆ. ಗಂಡ ತನ್ನನ್ನು ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದ, ಕೆಟ್ಟದಾಗಿ ನಿಂದಿಸುತ್ತಿದ್ದ. ಕಳೆದ ವರ್ಷ ನಮ್ಮ ಮದುವೆಯಾಗಿತ್ತು. ಮದುವೆಯಾಗಿ ಮೊದಲ ಬಾರಿಗೆ ಗಂಡನ ಮನೆಗೆ ಬಂದಾಗ ಅಯೋಧ್ಯೆ ಧಾಮ್ ರಸ್ತೆ ನೋಡಿ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿಯನ್ನು ಹೊಗಳಿದ್ದೆ. ಇದಕ್ಕೆ ಗಂಡ ಸಿಟ್ಟಾಗಿ ನನ್ನನ್ನು ತವರು ಮನೆಗೆ ಕಳುಹಿಸಿದ್ದ. ಬಳಿಕ ಮನೆಯವರ ಮಧ್ಯಸ್ಥಿಕೆಯಲ್ಲಿ ವಾಪಸ್ ಗಂಡನ ಮನೆಗೆ ಬಂದಿದ್ದೆ. ಆದರೆ ಗಂಡ ನನಗೆ ಮೂರು ಬಾರಿ ತಲಾಖ್ ಹೇಳಿದ್ದ. ಗಂಡನ ಮನೆಯಲ್ಲಿದ್ದಾಗ ಅತ್ತೆ, ನಾದಿನಿ, ಮೈದುನ ಎಲ್ಲರೂ ಹೊಡೆಯುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.