ನವದೆಹಲಿ (ಅ. 22) : ಮುಂದಿನ ವರ್ಷದ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಉತ್ತರ ಪ್ರದೇಶ, ಪಂಜಾಬ್ ಮಣಿಪುರ ಉತ್ತರಾಖಂಡ ಮತ್ತು ಗೋವಾ ವಿಧಾನಸಭಾ ಚುನಾವಣೆ ನಡೆಯಲಿದೆ.
ಈ ಪೈಕಿ 2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದರೆ ಎರಡು ಪ್ರಮುಖ ಪ್ರತಿಪಕ್ಷಗಳಾದ ಆಮ್ ಆದ್ಮಿಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳ ನೆಲೆ ವಿಸ್ತರಣೆ ಆಗುವ ದೃಷ್ಟಿಯಿಂದ ಗೋವಾ ವಿಧಾನಸಭಾ ಚುನಾವಣೆ ಅತ್ಯಂತ ಕುತೂಹಲಕಾರಿಯಾಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವುದಾಗಿ ಘೋಷಿಸಿದಾಗಲೇ ಇಂಥದೊಂದು ಕುತೂಹಲ ನಿರ್ಮಾಣ ಆಗಿತ್ತು. ಇತ್ತೀಚಿಗೆ ಟಿಎಂಸಿ ಗೋವಾದಲ್ಲಿ ಇಡುತ್ತಿರುವ ಹೆಜ್ಜೆಗಳಿಂದ ಆ ಪಕ್ಷ ತನ್ನ ಪ್ರಚಾರಕ್ಕೆ ಸ್ಟಾರ್ ಗಳನ್ನು ಸೆಳೆಯಲು ನೋಡುತ್ತಿದೆ ಎಂಬುದು ಗೊತ್ತಾಗಲಿದೆ. ಈಗ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರೇ ಸ್ವತಃ ಗೋವಾಕ್ಕೆ ಭೇಟಿ ನೀಡಿ ಚುನಾವಣಾ ತಂತ್ರ ರೂಪಿಸಲಿದ್ದಾರೆ. ಅಕ್ಟೋಬರ್ 28ರಿಂದ ಎರಡು ದಿನ ಗೋವಾದಲ್ಲಿ ಇರಲಿರುವ ಮಮತಾ ಬ್ಯಾನರ್ಜಿ ಪಕ್ಷದ ವತಿಯಿಂದ ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಲಿದ್ದಾರೆ.