ನವದೆಹಲಿ: ಸುಳ್ಳು, ವಂಚನೆ, ಮುಖವಾಡ, ಲೂಟಿ ಹೊಡೆಯುವುದು ಮತ್ತು ಪಬ್ಲಿಸಿಟಿ ಎಂಬ ಐದು ವಿಶೇಷಣಗಳಿಗೆ ನಿಮ್ಮ ಸರ್ಕಾರವೇ ಅತ್ಯುತ್ತಮ ಉದಾಹರಣೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ದುಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಟೀಕಾ ಪ್ರಹಾರ ನಡೆಸಿದ್ದರು. ಮೋದಿ ಇಂತಹದ್ದೊಂದು ಟ್ವೀಟ್ ಮಾಡುತ್ತಿದ್ದಂತೇ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ಕರ್ನಾಟಕದ ಗ್ಯಾರಂಟಿ ಯೋಜನೆಯಲ್ಲಿರುವ ಗೊಂದಲ ಮಲ್ಲಿಕಾರ್ಜುನ ಖರ್ಗೆಯ ಮಾತಿನಿಂದ ಬಯಲಾಗಿದೆ ಎಂದು ಮೋದಿ ಹೇಳಿದ್ದರು.
ಅವರ ಮಾತಿಗೆ ಸುದೀರ್ಘ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲನೆಯದಾಗಿ ನಿಮ್ಮ 100 ದಿನದ ಯೋಜನೆಯೇ ತುಂಬಾ ಚೀಪ್ ಪಿಆರ್ ಸ್ಟಂಟ್ ಅಷ್ಟೇ. 2047 ರ ರೋಡ್ ಮ್ಯಾಪ್ ಗಾಗಿ 20 ಲಕ್ಷಕ್ಕೂ ಹೆಚ್ಚು ಜನರಿಂದ ಮಾಹಿತಿ ಕಲೆ ಹಾಕಿದ್ದೀರಿ ಎಂದು ಹೇಳಿಕೊಂಡಿದ್ದಿರಿ. ಇದರ ಬಗ್ಗೆ ಆರ್ ಟಿಐ ಮೂಲಕ ವಿವರ ನೀಡಲು ನಿರಾಕರಿಸಿದೆ. ಇದು ನಿಮ್ಮ ಸುಳ್ಳುಗಳನ್ನು ಸಾಬೀತುಪಡಿಸುತ್ತದೆ.
ಬಿಜೆಪಿಯ ಬಿ ದ್ರೋಹ, ಜೆ ಜುಮ್ಲಾ ಎಂಬುದನ್ನು ಪ್ರತಿನಿಧಿಸುತ್ತದೆ. ನೀವು ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದಿರಿ. ಆ ಭರವಸೆ ಏನಾಯ್ತು? ಕಳೆದ 45 ವರ್ಷಗಳಲ್ಲೇ ಅತ್ಯಧಿಕ ನಿರುದ್ಯೋಗ ಸಮಸ್ಯೆ ಯಾಕೆ ಈಗ ಇದೆ? ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಯಾಕೆ ನಡೆಯುತ್ತಿದೆ?
ಜನ ಸಾಮಾನ್ಯರ ದಿನ ಬಳಕೆಯ ವಸ್ತುಗಳು ಕಳೆದ 50 ವರ್ಷಗಳೇ ಅತ್ಯಧಿಕ ಏರಿಕೆ ಕಂಡಿದೆ? ಟೊಮೆಟೊ, ಆಲೂಗಡ್ಡೆ, ಈರುಳ್ಳಿ ದರ ಯಾಕೆ ಹೆಚ್ಚಾಗಿದೆ? ಹಾಲು, ಮೊಸರು, ಗೋದಿ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ವಿಧಿಸಿದ್ದು ಯಾರು? ಅನಿಯಮಿತ ತೆರಿಗೆಗಳ ಮೂಲಕ ಮಧ್ಯಮ ವರ್ಗದವರ ಜನರಿಗೆ ತೆರಿಗೆಯ ಭಯ ಹುಟ್ಟಿಸಿದವರು ಯಾರು?
ನಿಮ್ಮ ಅಚ್ಚೇ ದಿನದ ಕತೆ ಏನಾಯ್ತು? ಭಾರತೀಯ ಕರೆನ್ಸಿ ಹಿಂದಿಗಿಂತಲೂ ಕೆಳಮಟ್ಟದಲ್ಲಿದೆ. ನಿಮ್ಮ ಸರ್ಕಾರರ ಕಳೆದ 10 ವರ್ಷಗಳಲ್ಲಿ 150 ಲಕ್ಷ ಕೋಟಿ ಸಾಲ ಪಡೆದಿದೆ. ಇದರಿಂದ ಪ್ರತೀ ಭಾರತೀಯನ ತಲೆಗೆ 1.5 ಲಕ್ಷ ಸಾಲವಿದ್ದಂತಾಗುತ್ತದೆ. ಆರ್ಥಿಕ ಅಸಮಾನತೆ 100 ವರ್ಷಗಳೇ ಅತ್ಯಂತ ಕೆಳಹಂತದಲ್ಲಿದೆ.
ನಿಮ್ಮ ವಿಕಸಿತ ಭಾರತದ ಕತೆ ಏನಾಯ್ತು? ನಿಮ್ಮ ಅವಧಿಯಲ್ಲಿ ನಿರ್ಮಾಣವಾದ ಪ್ರತಿಮೆಗಳೆಲ್ಲಾ ಮುರಿದು ಬೀಳುತ್ತಿವೆ. ಶಿವಾಜಿ ಪ್ರತಿಮೆ ಕತೆ ಏನಾಯ್ತು ಗೊತ್ತಲ್ಲ. ಅಯೋಧ್ಯೆ ರಾಮಮಂದಿರ, ಅಟಲ್ ಸೇತುಗಳಲ್ಲಿ ಬಿರುಕು ಬಂದಿದೆ. ವಿಮಾನ ನಿಲ್ದಾಣಗಳು ಮುರಿದುಬಿದ್ದವು ಎಂದು ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಇದಲ್ಲದೆ, ಭ್ರಷ್ಟಾಚಾರ ನಿರ್ಮೂಲನೆ, ಸಬ್ಕಾ ಸಾಥ್ ಸಬ್ಕಾ ವಿಕಾಸ್, ಹಿಂದುಳಿದ ವರ್ಗದವರ ಅಭಿವೃದ್ಧಿ ಸೇರಿದಂತೆ ಮೋದಿ ಸರ್ಕಾರ ನೀಡಿದ್ದ ಹಲವು ಭರವಸೆಗಳು ಸುಳ್ಳಾಗಿವೆ ಎಂದು ಖರ್ಗೆ ಟ್ವೀಟ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.