Publish Date: Tue, 10 Jun 2025 (09:24 IST)
Updated Date: Tue, 10 Jun 2025 (09:29 IST)
ಬೇಪೂರ್: ಕೇರಳದ ಬೇಪೂರ್ ಹಡಗು ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ 18 ಮಂದಿಯನ್ನು ಹಡಗಿನಿಂದ ರಕ್ಷಿಸಲಾಗಿದೆ. ಇವರಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರತದ ನೌಕಾ ಪಡೆಯ ಐಎನ್ಎಸ್ ಸೂರತ್ ಆಳ ಸಮುದ್ರದಿಂದ ಅಗ್ನಿಗೆ ಆಹುತಿಯಾಗಿದ್ದ ಹಡಗಿನಲ್ಲಿದ್ದ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಹೊರತಂದಿದೆ. ಮೊದಲು ಮಂಗಳೂರಿನ ನವಬಂದರಿಗೆ ಸಿಬ್ಬಂದಿಗಳನ್ನು ಕರೆತರಲಾಯಿತು. ಅಲ್ಲಿಂದ ಗಾಯಗೊಂಡವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದವರನ್ನು ಸ್ಥಳೀಯ ಹೋಟೆಲ್ ಗಳಲ್ಲಿ ಸುರಕ್ಷಿತವಾಗಿರಿಸಿಕೊಳ್ಳಲಾಗಿದೆ. ಗಾಯಗೊಂಡ ಸಿಬ್ಬಂದಿಗಳಲ್ಲಿ ಮೂವರು ಚೀನಾದವರು, ಇಬ್ಬರು ಬರ್ಮಾದವರೂ ಇದ್ದಾರೆ. ಒಬ್ಬರು ಇಂಡೋನೇಷ್ಯಾದವರು ಇದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಶ್ರೀಲಂಕಾದಿಂದ ಮುಂಬೈಗೆ ಸಾಗುತ್ತಿದ್ದ ಸಿಂಗಾಪುರ ಮೂಲದ ಹಡಗು ಇದಾಗಿದೆ. ಇದರಲ್ಲಿ ಪೈಂಟ್, ಗನ್ ಪೌಡರ್ ನಂತಹ ವಸ್ತುಗಳಿದ್ದವು. ಬೇಪೂರ್ ಕಡಲ ಕಿನಾರೆಯಿಂದ 78 ನಾಟಿಕಲ್ ಮೈಲ್ ದೂರದಲ್ಲಿ ಹಡಗಿಗೆ ಬೆಂಕಿ ಆವರಿಸಿದೆ. ಹಡಗಿನಲ್ಲಿ ಒಟ್ಟು 22 ಸಿಬ್ಬಂದಿಗಳಿದ್ದರು. ಈ ಪೈಕಿ 18 ಮಂದಿಯನ್ನು ರಕ್ಷಿಸಲಾಗಿದೆ. ಉಳಿದ ನಾಲ್ವರಿಗಾಗಿ ಶೋಧ ಮುಂದುವರಿದಿದೆ. ಹಡಗಿನಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.