ಬೆಂಗಳೂರು: ಎಲ್ಲಾ ಬೆಲೆ ಏರಿಕೆಗಳ ನಡುವೆ ಈಗ ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ ಟೋಲ್ ಸುಂಕವೂ ಹೆಚ್ಚಳವಾಗಲಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಲಿದೆ.
ವಾರ್ಷಿಕ ದರ ಪರಿಷ್ಕರಣೆ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸುಂಕ ಹೆಚ್ಚಳಕ್ಕೆ ಮುಂದಾಗಿದೆ. ಅದರಂತೆ ಏಪ್ರಿಲ್ 1 ರಿಂದ ಟೋಲ್ ಸುಂಕ ಮತ್ತಷ್ಟು ದುಬಾರಿಯಾಗಲಿದೆ. ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಪರಿಷ್ಕೃತ ದರ ಅನ್ವಯವಾಗಲಿದೆ.
ಎಷ್ಟು ಹೆಚ್ಚಳ?
ಪರಿಷ್ಕೃತ ದರದ ಪ್ರಕಾರ ಟೋಲ್ ಸುಂಕ ಗರಿಷ್ಠ ಶೇ.5 ರಷ್ಟು ಮತ್ತು ಕನಿಷ್ಠ ಶೇ.3 ರಷ್ಟು ಹೆಚ್ಚಳವಾಗಲಿದೆ. ಬೆಂಗಳೂರು-ಮೈಸೂರು, ಬೆಂಗಳೂರು-ತಿರುಪತಿ, ಬೆಂಗಳೂರು-ಬಾಗೇಪಲ್ಲಿ, ಬೆಂಗಳೂರು-ಹೈದರಾಬಾದ್ ಸೇರಿದಂತೆ ಒಟ್ಟು 66 ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳವಾಗಲಿದೆ.
2023-24 ನೇ ಸಾಲಿನಲ್ಲಿ ಭಾರತದಲ್ಲಿ ಟೋಲ್ ಸಂಗ್ರಹಣೆಯಿಂದ ಒಟ್ಟು 64, 809.86 ಕೋಟಿ ರೂ. ಟೋಲ್ ಸಂಗ್ರಹವಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕಗಳಿಗೆ ಹೊಸ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.