ನಾಗ್ಪುರ: ಇದೇ 17ರಂದು ಬಿಡುಗಡೆಯಾಗಲಿರುವ ಎಮರ್ಜೆನ್ಸಿ ಚಿತ್ರವನ್ನು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ನಾಗ್ಪುರದ ವಿಶೇಷ ಪ್ರದರ್ಶನದಲ್ಲಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಷ್ಟ್ರದ ಇತಿಹಾಸದ ಕರಾಳ ಅಧ್ಯಾಯವನ್ನು ಅಂತಹ ವಿಶ್ವಾಸಾರ್ಹತೆ ಮತ್ತು ಶ್ರೇಷ್ಠತೆಯೊಂದಿಗೆ ಪ್ರಸ್ತುತಪಡಿಸಿದ್ದಕ್ಕಾಗಿ ಎಮರ್ಜೆನ್ಸಿ ಚಿತ್ರತಂಡವನ್ನು ಪ್ರಶಂಸಿಸುತ್ತೇನೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಗಡ್ಕರಿ ತಿಳಿಸಿದ್ದಾರೆ.
1975ರ ತುರ್ತು ಪರಿಸ್ಥಿತಿ ಕಥಾ ಹಂದರವನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸಿರುವ ನಟಿ ಕಂಗನಾ ರನೌತ್ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಪಾತ್ರ ನಿರ್ವಹಿಸಿರುವ ಹಿರಿಯ ನಟ ಅನುಪಮ್ ಕೇರ್ ಜೊತೆಗಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಪ್ರದರ್ಶನ ಕುರಿತಂತೆ ಕಂಗನಾ ಚಿತ್ರಗಳನ್ನು ಹಂಚಿಕೊಂಡಿದ್ದು, ಒಂದು ಚಿತ್ರದಲ್ಲಿ ಕಂಗನಾ, ಗಡ್ಕರಿ ಮತ್ತು ಅನುಪಮ್ ಖೇರ್ ಮಾತುಕತೆ ನಡೆಸುತ್ತಿರುವುದು ಕಂಡುಬಂದಿದೆ.
ಚಿತ್ರದಲ್ಲಿ ಅನುಪಮ್ ಖೇರ್ ಅವರ ಅಭಿನಯವನ್ನು ಕೊಂಡಾಡಿರುವ ಕಂಗನಾ, ಅನುಪಮ್ ಖೇರ್ ಚಿತ್ರದ ಹೀರೊ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಅವರಿಲ್ಲದೆ ಸಿನಿಮಾ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ ಎಂದಿದ್ದಾರೆ.