Select Your Language

Notifications

webdunia
webdunia
webdunia
webdunia

ಕಾಲ್ತುಳಿತದಲ್ಲಿ ಕರ್ನಾಟಕದ ಯಾತ್ರಾರ್ಥಿಗಳಿಗೂ ಗಾಯ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು

ಕಾಲ್ತುಳಿತದಲ್ಲಿ ಕರ್ನಾಟಕದ ಯಾತ್ರಾರ್ಥಿಗಳಿಗೂ ಗಾಯ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು

Sampriya

ಪ್ರಯಾಗ್‌ರಾಜ್‌ , ಬುಧವಾರ, 29 ಜನವರಿ 2025 (14:33 IST)
ಪ್ರಯಾಗ್‌ರಾಜ್‌: ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಇಂದು ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಹಲವರು ಸಾವಿಗೀಡಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಗಳಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಲ್ತುಳಿತದಲ್ಲಿ ರಾಜ್ಯದ ಕೆಲವರು ಗಾಯಗೊಂಡಿರುವ ಮಾಹಿತಿಯಿದೆ. ಅವರೆಲ್ಲರನ್ನು ಕ್ಷೇಮವಾಗಿ ರಾಜ್ಯಕ್ಕೆ ಕರೆತರಲು ಅಧಿಕಾರಿಗಳನ್ನು ನಿಯೋಜಿಸಿದ್ದು, ನಮ್ಮವರ ರಕ್ಷಣೆಗೆ ಸರ್ಕಾರ ಎಲ್ಲ ರೀತಿಯ ಪ್ರಯತ್ನವನ್ನು ನಡೆಸುತ್ತಿದೆ. ಕುಂಭಮೇಳದಲ್ಲಿ ಪಾಲ್ಗೊಂಡಿರುವ ಕನ್ನಡಿಗರು ಸ್ವಲ್ಪ ಜಾಗರೂಕತೆಯಿಂದಿರಿ ಎಂದು ತಿಳಿಸಿದ್ದಾರೆ.

ಮಹಾಕುಂಭಮೇಳದಲ್ಲಿ ಮಂಗಳವಾರ ಮಧ್ಯರಾತ್ರಿಯ ಬಳಿಕ ಜನದಟ್ಟಣೆ, ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ಉಂಟಾಗಿದ್ದು, ಈ ವೇಳೆ ಹಲವರು ಗಾಯಗೊಂಡು, 15 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಜನವರಿ 13ರಂದು ಆರಂಭವಾದ ಮಹಾಕುಂಭ ಮೇಳಕ್ಕೆ ಈ ಬಾರಿ ಅತ್ಯಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ಇದುವರೆಗೆ ಸುಮಾರು 15 ಕೋಟಿ ಮಂದಿ ಸಂಗಮಕ್ಷೇತ್ರದಲ್ಲಿ ಪವಿತ್ರಸ್ನಾನ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಎರಡನೇ ಅಮೃತಸ್ನಾನದ ದಿನವಾದ ಬುಧವಾರ ಲಕ್ಷಾಂತರ ಭಕ್ತರು ಪ್ರಯಾಗ್ರಾಜ್ ಯಾತ್ರೆ ಕೈಗೊಂಡಿರುವುದರಿಂದ ಭಾರಿ ಜನದಟ್ಟಣೆ ಕಂಡುಬಂದಿದೆ.

ಕಾಲ್ತುಳಿತದಲ್ಲಿ ಗಾಯಗೊಂಡಿರುವ ಹಲವರ ಪೈಕಿ ಕೆಲವರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. ಕಾಲ್ತುಳಿತ ಘಟನೆ ವರದಿಯಾದ ಬೆನ್ನಲ್ಲೇ 2ನೇ ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಅಖಿಲ ಭಾರತೀಯ ಅಖಾರಾ ಪರಿಷತ್ ಅಧ್ಯಕ್ಷ ಶ್ರೀ ಮಹಾಂತ ರವೀಂದ್ರ ಅವರು ಹೇಳಿದ್ದಾರೆ.

ಘಟನೆ ಬೆನ್ನಲ್ಲೇ ಪ್ರಯಾಗ್ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಮಾತುಕತೆ ನಡೆಸಿದ್ದು, ಶೀಘ್ರಗತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಕೂಡ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಕೇಂದ್ರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಂಭಮೇಳಕ್ಕೆ ವಯಸ್ಕರು, ಮಕ್ಕಳು ಹೋಗಬಹುದೇ, ಈಗಾಗಲೇ ಹೋಗಿರುವವರ ಸಲಹೆ ನೋಡಿ