ಈ ಬಾರಿಯ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಗೈರಾಗಿರುವುದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆಗೆ ಜೈಶಂಕರ್ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.
ಕಳೆದ 15-20 ವರ್ಷಗಳಲ್ಲಿ ಜಾಗತೀಕರಣದ ಅಸಮಾನತೆಯಿಂದಾಗಿ ತೀವ್ರಮಟ್ಟದಲ್ಲಿ ಅಸಮಾಧಾನ ಮಡುಗಟ್ಟುತ್ತಾ ಬಂದಿದೆ. ತಮ್ಮ ಮಾರುಕಟ್ಟೆಗಳಿಗೆ ಬಹಳ ಅಗ್ಗದ ಸರಕುಗಳು ಬಂದು ಬೀಳುತ್ತಿರುವುದು ಬಹಳ ದೇಶಗಳಿಗೆ ಕಿರಿಕಿರಿಯಾಗುತ್ತಿದೆ, ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು ಚೀನಾವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ತಾನು ಪಾಶ್ಚಿಮಾತ್ಯ ದೇಶಗಳ ಪರವಾಗಿ ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇವತ್ತಿನ ಜಾಗತೀಕರಣದಲ್ಲಿ ಸಬ್ಸಿಡಿ ಇತ್ಯಾದಿ ಮೂಲಕ ಉತ್ಪಾದನೆಯು ಒಂದೇ ಕಡೆ ಕೇಂದ್ರಿತವಾಗಿದೆ. ಇದರಿಂದ ಹಲವು ದೇಶಗಳ ಆರ್ಥಿಕತೆಗೆ ಭಂಗವಾಗುತ್ತಿದೆ ಎಂದಿದ್ದಾರೆ.
ಹಲವು ವರ್ಷಗಳಿಂದ ಇದ್ದ ಅಸಮಾಧಾನದ ಜೊತೆಗೆ ಕೋವಿಡ್ ಹಾಗೂ ಉಕ್ರೇನ್ ಬಿಕ್ಕಟ್ಟು ಜಾಗತಿಕವಾಗಿ ಇಂಧನ ಮತ್ತು ಆಹಾರವಸ್ತುಗಳ ಬೆಲೆ ಹೆಚ್ಚಲು ಕಾರಣವಾಗಿದೆ ಎಂದ ಎಸ್ ಜೈಶಂಕರ್ ಅವರು, ಉತ್ಪಾದನೆ, ಕೃಷಿ, ವಿಜ್ಞಾನ, ಲಸಿಕೆ ಇತ್ಯಾದಿಯಲ್ಲಿ ಭಾರತದ ಸಾಧನೆಯು ಜಾಗತಿಕ ದಕ್ಷಿಣ ದೇಶಗಳಲ್ಲಿ ಒಂದು ರೀತಿಯ ಆಪ್ತ ಭಾವನೆ ಮೂಡಿದೆ. ತಮ್ಮ ಪೈಕಿಯವರೊಬ್ಬರು ನಿಂತು, ಬೆಳೆಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಈ ದೇಶಗಳು ಭಾವಿಸಿವೆ ಎಂದು ಹೇಳಿದ್ದಾರೆ.