ಚೆನ್ನೈ : ಕರ್ನಾಟಕದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಎದ್ದಿರುವ ನಡುವೆಯೇ ದೇಶ ಮುಖ್ಯವೋ, ಧರ್ಮ ಮುಖ್ಯವೋ ಎಂದು ಮದ್ರಾಸ್ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.
ದೇಶದಲ್ಲಿ ಇತ್ತೀಚೆಗೆ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದೆ. ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಯತ್ನ ನಡೆಯುತ್ತಿದೆ ಎಂದು ಅದು ಕಿಡಿಕಾರಿದೆ.
ತಮಿಳುನಾಡಿನ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಬೇಕು. ಹಿಂದೂಯೇತರರಿಗೆ ದೇವಾಲಯಗಳಲ್ಲಿ ಪ್ರವೇಶ ನೀಡಬಾರದು. ವಸ್ತ್ರಸಂಹಿತೆ ಬಗ್ಗೆ ದೇಗುಲದ ಹೊರಗಿನ ಫಲಕಗಳ ಮೇಲೆ ಬರೆಯುವಂತೆ ಆದೇಶಿಸಬೇಕು ಎಂದು ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಾಧೀಶ ನ್ಯಾ ಎಂ.ಎನ್.ಭಂಡಾರಿ ಹಾಗೂ ನ್ಯಾ ಡಿ.ಭರತ ಚಕ್ರವರ್ತಿ ಅವರು ಈ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ಒಂದು ಜಾತ್ಯತೀತ ದೇಶ. ಆದರೆ ಈಗಿನ ವಿದ್ಯಮಾನ ನೋಡಿದರೆ ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವ ಯತ್ನ ನಡೆದಿದೆ ಎಂಬುದು ವೇದ್ಯವಾಗುತ್ತದೆ ಎಂದು ಕಿಡಿಕಾರಿತು.