ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಬೆಳಗ್ಗೆ 11 ಗಂಟೆಯ ಸುಮಾರಿಗೆ ದೆಹಲಿಯ ದ್ವಾರಕಾದಲ್ಲಿ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ ಯಶೋಭೂಮಿಯನ್ನು ಉದ್ಘಾಟಿಸಲಿದ್ದಾರೆ.
ಈ ಕುರಿತು ಮೋದಿ ಟ್ವೀಟ್ ಮಾಡಿದ್ದು, ನಾನು ದೆಹಲಿಯ ದ್ವಾರಕಾದಲ್ಲಿ ಅತ್ಯಾಧುನಿಕ ಮತ್ತು ಆಧುನಿಕ ಸಮಾವೇಶ ಮತ್ತು ಎಕ್ಸ್ಪೋ ಕೇಂದ್ರವಾದ ಯಶೋಭೂಮಿಯ ಹಂತ-1 ಅನ್ನು ಉದ್ಘಾಟಿಸುತ್ತೇನೆ. ಸಮ್ಮೇಳನಗಳು ಮತ್ತು ಸಭೆಗಳಿಗೆ ಇದು ಅತ್ಯಂತ ಬೇಡಿಕೆಯ ತಾಣವಾಗಿದೆ ಎಂದು ನನಗೆ ವಿಶ್ವಾಸವಿದೆ. ಇದು ಪ್ರಪಂಚದಾದ್ಯಂತ ಪ್ರತಿನಿಧಿಗಳನ್ನು ಸೆಳೆಯುತ್ತದೆ ಎಂದು ತಿಳಿಸಿದ್ದಾರೆ.
ಸುಸ್ಥಿರತೆಗೆ ಯಶೋಭೂಮಿ ಸಮನಾರ್ಥಕವಾಗಿರಲಿದೆ. ಇದು ಆಧುನಿಕ ತ್ಯಾಜ್ಯನೀರಿನ ಸಂಸ್ಕರಣಾ ವ್ಯವಸ್ಥೆ, ಮಳೆ ನೀರು ಕೊಯ್ಲನ್ನು ಹೊಂದಿದೆ. ಈ ಸಂಕೀರ್ಣ ಇಂಡಿಯನ್ ಗ್ರೀನ್ ಬಿಲ್ಡಿಂಗ್ನಿಂದ ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಹೊಸ ಮೆಟ್ರೋ ನಿಲ್ದಾಣ, ಯಶೋಭೂಮಿ ದ್ವಾರಕಾ ಸೆಕ್ಟರ್ 25 ಅನ್ನು ಕೂಡಾ ಉದ್ಘಾಟಿಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ.
ದೆಹಲಿ ಮೆಟ್ರೋ ಏರ್ಪೋರ್ಟ್ ಎಕ್ಸ್ಪ್ರೆಸ್ ಲೈನ್ನಲ್ಲಿ ಮೆಟ್ರೋ ರೈಲುಗಳ ಕಾರ್ಯಾಚರಣೆ ವೇಗವನ್ನು ಗಂಟೆಗೆ 90ರಿಂದ 120 ಕಿಲೋ ಮೀಟರ್ಗೆ ಹೆಚ್ಚಿಸುವ ಮೂಲಕ ಪ್ರಯಾಣದ ಸಮಯವನ್ನು ಕಡಿಮೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನವದೆಹಲಿಯಿಂದ ಯಶೋಭೂಮಿ ಪ್ರಯಾಣಕ್ಕೆ ಒಟ್ಟು 21 ನಿಮಿಷಗಳು ಬೇಕಾಗುತ್ತದೆ.
ಯಶೋಭೂಮಿ 8.9 ಲಕ್ಷ ಚದರ ಮೀಟರ್ಗಿಂತಲೂ ಹೆಚ್ಚು ಯೋಜನಾ ಪ್ರದೇಶ ಮತ್ತು 1.8 ಲಕ್ಷ ಚದರ ಮೀಟರ್ಗಿಂತ ಹೆಚ್ಚಿನ ಒಟ್ಟು ನಿರ್ಮಾಣ ಪ್ರದೇಶದೊಂದಿಗೆ ವಿಶ್ವದ ಅತಿದೊಡ್ಡ MICE ಸೌಲಭ್ಯಗಳಲ್ಲಿ ಒಂದಾಗಲಿದೆ.