Publish Date: Fri, 18 Mar 2022 (08:04 IST)
Updated Date: Fri, 18 Mar 2022 (09:07 IST)
ಕೋಲ್ಕತ್ತಾ : ತನ್ನ ಕುಟುಂಬಸ್ಥರ ವಿರೋಧದ ನಡುವೆಯೂ 10ನೇ ತರಗತಿ ಪರೀಕ್ಷೆ ಬರೆದಳು ಎಂಬ ಒಂದೇ ಕಾರಣಕ್ಕೆ ಆಕ್ರೋಶಗೊಂಡ ಪತಿ ಮಹಾಶಯ 'ಅಪ್ರಾಪ್ತ ಪತ್ನಿ' ಮೇಲೆ ಆ್ಯಸಿಡ್ ಎರಚಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಈ ಘೋರ ಘಟನೆ ನಡೆದಿದ್ದು, ಪರೀಕ್ಷಾ ಕೇಂದ್ರದ ಎದುರೇ ಪಾಪಿ ಪತಿ ಪತ್ನಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ.
ಘಟನೆಯಲ್ಲಿ ಪತ್ನಿಯ ಮುಖ ಮತ್ತು ದೇಹದ ಮೇಲ್ಭಾಗದಲ್ಲಿ ತೀವ್ರ ಸುಟ್ಟ ಗಾಯಗಳಾಗಿದ್ದು, ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯನ್ನು ಈತ ಮದುವೆಯಾಗಿದ್ದ. ಮದುವೆ ಬಳಿಕ ಓದು ಬೇಡ ಎಂದು ಆತನ ಕುಟುಂಬಸ್ಥರು ಹೇಳಿದ್ದರು. ಆದರೆ ಶಿಕ್ಷಣದಲ್ಲಿ ಆಸಕ್ತಿ ಇದ್ದ ಅಪ್ರಾಪ್ತ ಬಾಲಕಿ ಮಗುವಿನ ತಾಯಿಯಾದ ಬಳಿಕ ತನ್ನ ಹೆತ್ತವರ ಮನೆಗೆ ಹೋಗಿ ಅಲ್ಲಿಂದಲೇ ಈ ವರ್ಷದ ಮಾಧ್ಯಮಿಕ ಪರೀಕ್ಷೆಗೆ ಹಾಜರಾಗುತ್ತಿದ್ದಳು. ಈ ವಿಷಯವನ್ನು ಅರಿತು ಆಕ್ರೋಶಗೊಂಡ ಪಾಪಿ ಪತಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಜಗಳ ಮಾಡಿ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ.
ಈ ಬಗ್ಗೆ ಪೊಲೀಸರ ಬಳಿ ಸಂತ್ರಸ್ಥೆ ಹೇಳಿಕೆ ದಾಖಲಿಸಿದ್ದು, 'ಮೊದಲಿನಿಂದಲೂ, ನನ್ನ ಪತಿ ಮಾಧ್ಯಮಿಕ ಪರೀಕ್ಷೆಗೆ ಹಾಜರಾಗುವ ನನ್ನ ನಿರ್ಧಾರವನ್ನು ವಿರೋಧಿಸುತ್ತಿದ್ದರು. ನಾನು ನನ್ನ ತಂದೆಯ ಮನೆಯಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ.