Select Your Language

Notifications

webdunia
webdunia
webdunia
webdunia

ಮಾ.12ರಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ

ಮಾ.12ರಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ
bangalore , ಶುಕ್ರವಾರ, 11 ಮಾರ್ಚ್ 2022 (17:58 IST)
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇರುವ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಇದೇ 12ರಿಂದ 16ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಪರೀಕ್ಷಾ ಕೇಂದ್ರಗಳಿರುವ 7 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠರು, ಕಮಿಷನರ್ ಮತ್ತಿತರ ಅಧಿಕಾರಿಗಳೊಂದಿಗೆ ಬುಧವಾರ ವಿಡಿಯೋ ಸಂವಾದ ನಡೆಸಿದರು.
ಈ ಸಭೆಯಲ್ಲಿ ಅವರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ಹೊಡೆಯುವುದು ಸೇರಿದಂತೆ ಯಾವುದೇ ಅಕ್ರಮಕ್ಕೆ ಕಿಂಚಿತ್ತೂ ಅವಕಾಶ ಮಾಡಿಕೊಡಬಾರದು. ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಮತ್ತು ಪಾರದರ್ಶಕವಾಗಿ ನಡೆಸಬೇಕು ಎಂದು ಸಚಿವರು ಸೂಚನೆ ನೀಡಿದರು.
ವಿಚ್ಛಿದ್ರಕಾರಿ ಶಕ್ತಿಗಳು ಪರೀಕ್ಷಾ ವ್ಯವಸ್ಥೆಯನ್ನು ಹಾಳುಗೆಡವಲು ಅಥವಾ ಈ ನೇಮಕಾತಿ ಪ್ರಕ್ರಿಯೆಗೆ ಕಳಂಕ ತರಲು ಆಸ್ಪದ ಕೊಡಬಾರದು. ಹಾಗೇನಾದರೂ ಆದರೆ, ಪರೀಕ್ಷಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠರನ್ನೇ ಹೊಣೆಗಾರರಾಗಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
33 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಗಳು ಬೆಂಗಳೂರು ನಗರ, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ನಡೆಯಲಿವೆ. ಇದಕ್ಕಾಗಿ 1,409 ಕೊಠಡಿ ಮೇಲ್ವಿಚಾರಕರು, 82 ವೀಕ್ಷಕರು, 82 ಕಸ್ಟೋಡಿಯನ್ಸ್ ಮತ್ತು 164 ಮಂದಿಯ ವಿಶೇಷ ಜಾಗೃತ ದಳವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
12 ಮತ್ತು 13ರಂದು 82 ಪರೀಕ್ಷಾ ಕೇಂದ್ರಗಳಲ್ಲಿ, 14ರಂದು 22, 15ರಂದು 24 ಮತ್ತು 16ರಂದು 8 ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಇದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಅಭ್ಯರ್ಥಿಗಳು ಸೂಚಿತ ವಸ್ತ್ರಸಂಹಿತೆಯನ್ನು ಪಾಲಿಸಬೇಕು. ಜತೆಗೆ, ಅಕ್ರಮಗಳ ತಡೆಗೆ ಸಹಾಯವಾಣಿಯನ್ನೂ (ಮೊಬೈಲ್ 99015-81708) ರಚಿಸಲಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಪರೀಕ್ಷಾ ಕೇಂದ್ರಗಳ ಸುತ್ತ‌ ನಿಷೇಧಜ್ಣ ಜಾರಿಗೊಳಿಸಲು ಸೂಚಿಸಲಾಗಿದೆ ಎಂದರು.
ವಿಡಿಯೋ ಸಂವಾದದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಇದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್