ನವದೆಹಲಿ: ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಹೊಸ ನಿಯಮದ ಬಳಿಕ ಇಂಡಿಗೋ ವಿಮಾನ ಸೇವೆಯಲ್ಲಿ ಭಾರೀ ವ್ಯತ್ಯಯವಾದ ಬಳಿಕ ಡಿಜಿಸಿಎ ನಿಯಮದಲ್ಲಿ ಸಡಿಲಿಕೆ ಮಾಡಿದೆ.
ಇತರ ಕಂಪನಿಗಳಿಗೆ ಹೋಲಿಸಿದರೆ ಇಂಡಿಗೋ ಕಡಿಮೆ ವೆಚ್ಚದ ವಿಮಾನ ಸೇವೆಗಳನ್ನು ನೀಡುತ್ತಿದೆ. ರಾತ್ರಿ ಸಮಯದಲ್ಲೇ ಹೆಚ್ಚಿನ ವಿಮಾನಗಳನ್ನು ಹಾರಿಸುತ್ತದೆ. ಡಿಜಿಸಿಎ ರಾತ್ರಿ ವಿಮಾನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಠಿಣ ನಿಯಮ ಜಾರಿ ಮಾಡಿದ್ದು ಇಂಡಿಗೋಗೆ ಬಹಳ ಹೊಡೆತ ನೀಡಿದೆ.
ಡಿಜಿಸಿಎ ಜನವರಿಯಲ್ಲೇ ಈ ನಿಯಮ ಜಾರಿ ಮಾಡಿದ್ದರೂ ಕಂಪನಿಗಳು ಹಂತ ಹಂತವಾಗಿ ಈ ನಿಯಮಗಳನ್ನು ಪಾಲನೆ ಮಾಡಬೇಕೆಂದು ಸೂಚಿಸಿತ್ತು. ಜುಲೈ 1 ರಂದು ಮೊದಲ ಹಂತ ಜಾರಿಯಾಗಿತ್ತು. ಈ ಸಂದರ್ಭದಲ್ಲಿ 15 ಷರತ್ತುಗಳು ಸಡಿಲವಾಗಿತ್ತು. ನವೆಂಬರ್ 1 ರಿಂದ ನೈಟ್ ಲ್ಯಾಂಡಿಂಗ್ ಸೇರಿದಂತೆ ಉಳಿದ ಷರತ್ತುಗಳು ಜಾರಿಯಾದವು.
ವಿಮಾನಯಾನ ಸಿಬ್ಬಂದಿ ಸಾಪ್ತಾಹಿಕ ವಿಶ್ರಾಂತಿಗೆ ರಜೆಯನ್ನು ಬದಲಾಯಿಸಬಾರದು ಎಂಬ ತನ್ನ ಇತ್ತೀಚಿನ ನಿರ್ದೇಶನವನ್ನು ಡಿಜಿಸಿಎ ತಕ್ಷಣವೇ ಹಿಂದಕ್ಕೆ ಪಡೆದುಕೊಂಡಿದೆ.
24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಡಿಜಿಸಿಎ ತನ್ನ ಎಫ್‌ಡಿಟಿಎಲ್ ಮಾನದಂಡಗಳಿಗೆ ಮಾಡಿದ ಎರಡನೇ ಬದಲಾವಣೆ ಇದಾಗಿದೆ. ಗುರುವಾರ ರಾತ್ರಿ ಪೈಲಟ್ ಹಾರಾಟ ನಡೆಸಬಹುದಾದ ಸತತ ಗಂಟೆಗಳ ಸಂಖ್ಯೆಯ ಮಿತಿಯನ್ನು 12 ರಿಂದ 14ಕ್ಕೆ ವಿಸ್ತರಿಸಿತ್ತು.
ಎರಡು ದಿನಗಳಿಂದ ಸಾವಿರಕ್ಕೂ ಹೆಚ್ಚು ವಿಮಾನ ಹಾರಾಟವನ್ನು ಇಂಡಿಗೋ ರದ್ದು ಮಾಡಿತ್ತು. ದಿಢೀರ್ ರದ್ದು ಮಾಡಿದ್ದರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣ ದಟ್ಟಣೆ ಹೆಚ್ಚಾಗಿತ್ತು. ಪ್ರಯಾಣಿಕರು ಸಿಬಂದಿ ವಿರುದ್ಧ ಮುಗಿಬಿದ್ದಿದ್ದರು.
ಪೈಲಟ್ ಅಥವಾ ಕ್ಯಾಬಿನ್ ಸಿಬ್ಬಂದಿಗೆ ಒಂದು ದಿನದಲ್ಲಿ ಒಟ್ಟು 10-13 ಗಂಟೆ ಕರ್ತವ್ಯ ಮಾಡಬಹುದಿತ್ತು. ಆದರೆ ವಿಮಾನಯಾನ ರೋಸ್ಟರ್ ಮಾನದಂಡಗಳ ಪ್ರಕಾರ ಈಗ ಗರಿಷ್ಠ 10 ಗಂಟೆ ಮಾತ್ರ ನಿಗದಿ ಮಾಡಲಾಗಿದೆ.
ಈ ಮೊದಲು ವಾರದಲ್ಲಿ ಕನಿಷ್ಠ 36 ಗಂಟೆ ವಿಶ್ರಾಂತಿ ನೀಡಲಾಗುತ್ತಿತ್ತು. ಆದರೆ ಈಗ ಕನಿಷ್ಠ 48 ಗಂಟೆ ವಿಶ್ರಾಂತಿ ಪಡೆಯಬೇಕೆಂದು ಸೂಚಿಸಲಾಗಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ ಬಳಿಕ 10 ಗಂಟೆ ವಿಶ್ರಾಂತಿ ಪಡೆಯಬಹುದಾಗಿತ್ತು. ಆದರೆ ಈಗ ಈ ಅವಧಿಯನ್ನು12 ಗಂಟೆಗೆ ವಿಸ್ತರಿಸಲಾಗಿದೆ.
ಮೊದಲು ರಾತ್ರಿ ಸಮಯದಲ್ಲಿ 6 ಬಾರಿ ಲ್ಯಾಂಡಿಂಗ್ ಮಾಡಲು ಅವಕಾಶವಿತ್ತು. ಆದರೆ ಈಗ 2 ಬಾರಿ ಮಾತ್ರ ಲ್ಯಾಂಡಿಂಗ್‌ಗೆ ಅವಕಾಶ ನೀಡಲಾಗಿದೆ.
ದೇಶದ ವಾಯುಯಾನ ಮಾರುಕಟ್ಟೆಯಲ್ಲಿ ಇಂಡಿಗೋ ಶೇ 64ರಷ್ಟು ಪಾಲನ್ನು ಹೊಂದಿದ್ದು ಏರ್ ಇಂಡಿಯಾ ಶೇ 26ರಷ್ಟು ಪಾಲನ್ನು ಹೊಂದಿದೆ. ಇಂಡಿಗೋ ಪ್ರತಿದಿನ 2,200 ಕ್ಕೂ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುತ್ತದೆ.