ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಬಾಂಬ್ ಸ್ಪೋಟಿಸಿದ್ದ ಉಗ್ರ ಮುಸಾವೀರ್ ಶಾಜೀಬ್ ಹುಸೇನ್ ಮತ್ತು ಪ್ಲ್ಯಾನ್ ರೂಪಿಸಿದ್ದ ಅಬ್ದುಲ್ ಮತೀನ್ ತಾಹಾ ಈಗ ಎನ್ ಐಎ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಪಶ್ಚಿಮ ಬಂಗಾಲದಲ್ಲಿ ಈ ಪಾಪಿಗಳನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಎನ್ ಐಎ ವಶಕ್ಕೊಪ್ಪಿಸಲಾಗಿದೆ. ಅಷ್ಟಕ್ಕೂ ಎನ್ ಐಎ ಅಧಿಕಾರಿಗಳು ಈ ಪಾತಕಿಗಳನ್ನು ಪತ್ತೆ ಮಾಡಿದ್ದು ಹೇಗೆ ಗೊತ್ತಾ?
ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಈಗಾಗಲೇ ಜೈಲಿನಲ್ಲಿರುವ ಉಗ್ರರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದರು. ಇದಕ್ಕೆ ಮೊದಲು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದ ರೀತಿಯಲ್ಲೇ ಈ ಪ್ರಕರಣವೂ ಇದ್ದಿದ್ದರಿಂದ ಆರೋಪಿಗಳ ಮೂಲ ಹುಡುಕಿದ್ದರು.
ಮತೀನ್ ತೀರ್ಥಹಳ್ಳಿ ಮೂಲದವನು. ತುಂಗಾತೀರದಲ್ಲಿ ಬಾಂಬ್ ಟ್ರಯಲ್ ನಡೆಸಿದ್ದ. ಈತನೇ ಮಂಗಳೂರಿನಲ್ಲೂ ಕುಕ್ಕರ್ ಬಾಂಬ್ ಇಡಲು ಪರಿಕರಗಳನ್ನು ನೀಡಿದ್ದ. ಆರೋಪಿಗಳಿಗಾಗಿ ಕೇರಳ, ಕರ್ನಾಟಕ, ತೆಲಂಗಾಣದಲ್ಲಿ ಹುಡುಕಾಟ ನಡೆಸಲಾಗುತ್ತಿತ್ತು. ಪಶ್ಚಿಮ ಬಂಗಾಲದಲ್ಲಿ ಆರೋಪಿಗಳು ನಕಲಿ ಆಧಾರ್ ಕಾರ್ಡ್ ನೀಡಿ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ರಾತ್ರಿ 11 ಗಂಟೆಗೆ ಕಾರ್ಯಾಚರಣೆ ಶುರು ಮಾಡಿದ್ದ ಎನ್ಐಎ ಅಧಿಕಾರಿಗಳು ಬೆಳಿಗ್ಗಿನ ಜಾವ 5 ಗಂಟೆಗೆ ಆರೋಪಿಗಳನ್ನು ಬಂಧಿಸಲಾಗಿತ್ತು.