Publish Date: Thu, 28 Aug 2025 (18:46 IST)
Updated Date: Thu, 28 Aug 2025 (18:48 IST)
ನವದೆಹಲಿ: ಭಾರತದಲ್ಲಿ ಮಾಲಿನ್ಯ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ಮೀರಿದ್ದು, ಇದರಿಂದಾಗಿ ಒಟ್ಟು ಜೀವಿತಾವಧಿ 3.5 ವರ್ಷ ಕಡಿತವಾಗಿದೆ ಎಂದು ವರದಿ ಬಂದಿದೆ.
ಅತ್ಯಂತ ಶುಚಿಯಾದ ನಗರದಲ್ಲಿ ಗಾಳಿಯ ಗುಣಮಟ್ಟ ಉತ್ತಮಪಡಿಸಿದರೆ ಭಾರತೀಯರು 9.4 ತಿಂಗಳು ಹೆಚ್ಚು ಬದುಕಬಹುದು ಎಂದು ವರದಿಯೊಂದು ಹೇಳಿದೆ.
ಷಿಕಾಗೊ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ 2025ರ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.
2022ನೇ ಸಾಲಿಗೆ ಹೋಲಿಸಿದಲ್ಲಿ ಅಪಾಯಕಾರಿ ಪಿಎಂ2.5ರಷ್ಟು ಸಾಂಧ್ರತೆಯ ದೂಳಿನ ಕಣವು 2023ರಲ್ಲಿ ಹೆಚ್ಚಳವಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗಿಂತಲೂ ಎಂಟು ಪಟ್ಟು ಅಧಿಕವಾಗಿದೆ. ಇದರ ಪರಿಣಾಮ ಭಾರತೀಯರ ಜೀವಿತಾವಧಿಯು 3.5 ವರ್ಷ ಕಡಿತಗೊಳ್ಳಲಿದೆ ಎಂದು ವರದಿ ಹೇಳಿದೆ.
ಒಂದೊಮ್ಮೆ ಇಡೀ ಭಾರತವೇ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿ ಗಾಳಿಯ ಗುಣಮಟ್ಟವನ್ನು ಕಾಪಾಡಿಕೊಂಡಿದ್ದೇ ಆದಲ್ಲಿ ಜೀವಿತಾವಧಿಯು 8.2 ವರ್ಷಗಳಷ್ಟು ಹೆಚ್ಚಾಗಲಿದೆ ಎಂದೂ ಈ ವರದಿ ಸಲಹೆ ನೀಡಿದೆ.