ಅಹಮದಾಬಾದ್ (ಗುಜರಾತ್): ರಾಜ್ಯದಲ್ಲಿ ಸುರಿದ ಮಳೆಯಿಂದ ಕನಿಷ್ಠ 14ಜನ ಮೃತಪಟ್ಟಿರುವ ಘಟನೆ ಬಗ್ಗೆ ಮಂಗಳವಾರ ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದ 253 ತಾಲ್ಲೂಕುಗಳ ಪೈಕಿ 168 ತಾಲ್ಲೂಕುಗಳಲ್ಲಿ ಅಕಾಲಿಕ ಮಳೆಯಾಗಿದೆ. ಖೇಡಾ, ಗಾಂಧಿನಗರ, ಮೆಹ್ಸಾನಾ ಮತ್ತು ವಡೋದರಾ ಜಿಲ್ಲೆಗಳಲ್ಲಿ 25 ರಿಂದ 40 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹಲವು ಜಿಲ್ಲೆಗಳಲ್ಲಿ ಬೀಸಿದ ಗಾಳಿಯಿಂದಾಗಿ ಹೋರ್ಡಿಂಗ್‌ಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಜತೆಗೆ ಕೆಲವು ಮನೆಗಳು ಕುಸಿದು ಬಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್‌ನ ಅಹಮದಾಬಾದ್, ಆನಂದ್, ಖೇಡಾ, ದಾಹೋದ್, ಅರಾವಳಿ ಮತ್ತು ವಡೋದರಾ ಜಿಲ್ಲೆಗಳಲ್ಲಿ ಸೋಮವಾರ ಸಿಡಿಲು, ವಿದ್ಯುತ್ ಅವಘಡ, ಮರಗಳು, ಮನೆಗಳು ಮತ್ತು ಹೋರ್ಡಿಂಗ್‌ಗಳು ಕುಸಿದು ಬಿದ್ದ ಪರಿಣಾಮ 13 ಜನ ಸಾವನ್ನಪ್ಪಿದ್ದಾರೆ.
ಭಾನುವಾರ ಅಹಮದಾಬಾದ್‌ನ ವಿರಮ್‌ಗಾಮ್‌ನಲ್ಲಿ ಸಿಡಿಲು ಬಡಿದು ಒಬ್ಬರು ಮೃತಪಟ್ಟಿದ್ದಾರೆ ಎಂದು ಎಸ್‌ಇಒಸಿ ತಿಳಿಸಿದೆ.
ಮುಂದಿನ ಕೆಲವು ದಿನಗಳವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ಹಾಗೂ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ ) ಮುನ್ಸೂಚನೆ ನೀಡಿದೆ.