ಹೈದರಾಬಾದ್: ದೇಶವನ್ನೇ ಬೆಚ್ಚಿಬೀಳಿಸಿದ ಕರ್ನೂಲ್ ಬಸ್ ದುರಂತ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ದೊರಕಿದೆ. ಪೊಲೀಸ್ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿದೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್ ಎಸಿ ಬಸ್ ಬೆಂಕಿ ಹೊತ್ತಿಕೊಂಡು 19 ಪ್ರಯಾಣಿಕರ ಸಜೀವ ದಹನಕ್ಕೆ ಕಾರಣವಾಗಿದ್ದ ಬೈಕ್ ಸವಾರ, ಈ ಅಪಘಾತಕ್ಕೂ ಮೊದಲೇ ಸ್ಕಿಡ್ ಆಗಿ, ಮೃತಪಟ್ಟಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಬಸ್ ಚಾಲಕನಿಗೆ ಇದು ಗೊತ್ತಾಗದೆ ಈ ಬೈಕಿಗೆ ಡಿಕ್ಕಿ ಹೊಡೆದು, ಕೆಲ ದೂರ ಎಳೆದೊಯ್ದಿದೆ. ಅದೇ ವೇಳೆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸೋರಿಕೆಯಾಗಿದೆ. ಈ ಸಂದರ್ಭದಲ್ಲಿ ಆದ ಘರ್ಷಣೆಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಪಲ್ಸರ್ ಬೈಕ್‌ನಲ್ಲಿ ಹಿಂಬದಿ ಸವಾರನ ಜತೆಗೆ ಹೋಗುತ್ತಿದ್ದ ಬಿ. ಶಿವಶಂಕರ್ (22), ಕರ್ನೂಲ್ ಜಿಲ್ಲೆಯ ಚಿನ್ನತೇಕೂರು ಬಳಿ ಹೆದ್ದಾರಿಯಲ್ಲಿ ಸ್ಕಿಡ್ ಆಗಿ, ಹೆದ್ದಾರಿಯ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ವೇಳೆ ಹಿಂಬದಿ ಸವಾರ ಯರ್‍ರಿಸ್ವಾಮಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದುರಂತದ ಬಳಿಕ ಆತಂಕಗೊಂಡ ಯರ್‍ರಿಸ್ವಾಮಿ ತಮ್ಮ ಗ್ರಾಮವಾದ ತುಗ್ಗಲಿಗೆ ಓಡಿಹೋಗಿದ್ದರು. ಪೆಟ್ರೋಲ್ ಬಂಕ್ ಒಂದರ ಸಿ.ಸಿ.ಟಿ.ವಿ ದೃಶ್ಯಗಳನ್ನು ಆಧರಿಸಿ, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲ ವಿಷಯಗಳು ಗೊತ್ತಾಗಿವೆ ಎಂದು ಕರ್ನೂಲ್ ಎಸ್‌ಪಿ ವಿಕ್ರಾಂತ್ ಪಾಟೀಲ್ ತಿಳಿಸಿದ್ದಾರೆ.
ಚಿನ್ನತೇಕೂರು ಬಳಿ ಶಿವಶಂಕರ್ ಸ್ಕಿಡ್ ಆಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದರು. ಸಣ್ಣಪುಟ್ಟ ಗಾಯಗಳಾಗಿದ್ದ ಯರ್‍ರಿಸ್ವಾಮಿ ಅವರು, ಶಿವಶಂಕರ್ ದೇಹವನ್ನು ಸ್ವಲ್ಪ ದೂರ ಎಳೆದು ಉಸಿರಾಟ ಪರಿಶೀಲಿಸಿದರು. ಉಸಿರಾಟ ನಿಂತಿರುವುದನ್ನು ಖಚಿತಪಡಿಸಿಕೊಂಡ ಅವರು, ಬೈಕ್ ಅನ್ನು ಪಕ್ಕಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಾಗ ದಿಢೀರನೇ ಬಸ್ ಬಂದು ಡಿಕ್ಕಿ ಹೊಡೆದಿದೆ. ಬಸ್ಸಿನ ಕೆಳಗೆ ಬೆಂಕಿ ಕಾಣಸಿಕೊಂಡಿದ್ದರಿಂದ ಆತಂಕಗೊಂಡ ಯರ್‍ರಿಸ್ವಾಮಿ ಸ್ಥಳದಿಂ ಪರಾರಿಯಾಗಿದ್ದರು.
ಬಸ್ಸಿನ ಲಗೇಜ್ ಕಪಾಟಿನ ಪೆಟ್ಟಿಗೆಯಲ್ಲಿದ್ದ ಹಲವು ಸ್ಮಾರ್ಟ್ ಫೋನ್‌ಗಳು ಬೆಂಕಿಗೆ ಆಹುತಿಯಾಗಿವೆ. ಅವುಗಳ ಲೀಥಿಯಂ–ಅಯಾನ್ ಬ್ಯಾಟರಿಗಳೂ ಸ್ಫೋಟಿಸಿರುವುದರಿಂದ ದುರಂತದ ತೀವ್ರತೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
234 ಸ್ಮಾರ್ಟ್ ಫೋನ್‌ಗಳನ್ನು ಹೈದರಾಬಾದ್ ಮೂಲದ ಉದ್ಯಮಿ ಮಂಗನಾಥ್ ಎಂಬುವರು ಪಾರ್ಸೆಲ್ ಕಳುಹಿಸಿದ್ದರು. ಅದನ್ನು ಬೆಂಗಳೂರಿನ ಇ–ಕಾರ್ಮರ್ಸ್ ಕಂಪನಿಗೆ ಕಳುಹಿಸಲಾಗುತ್ತಿತ್ತು. ಅಲ್ಲಿಂದ ಅದು ಗ್ರಾಹಕರಿಗೆ ಸರಬರಾಜು ಆಗಬೇಕಿತ್ತು ಎಂದು ಮೂಲಗಳು ತಿಳಿಸಿವೆ.