ಔರಾದ್: ಮನಿ ಲ್ಯಾಂಡಿಂಗ್ ಕೇಸಿನಲ್ಲಿ ನೀವು ಭಾಗಿಯಾಗಿದ್ದಿರಿ ಎಂದು ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರ ಬ್ಯಾಂಕ್ ಖಾತೆಯಿಂದ ₹30.99 ಲಕ್ಷ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಮಾಜಿ ಶಾಸಕರ ವಕೀಲರು ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.
ಆಗಸ್ಟ್ 12ರಂದು ತಮ್ಮ ಬ್ಯಾಂಕ್ ಖಾತೆಯಿಂದ ₹ 30.99 ಲಕ್ಷ ಅಕ್ರಮವಾಗಿ ದೋಚಲಾಗಿದೆ. ಇದರ ಹಿಂದೆ ಮುಂಬೈ ಮೂಲದ ಸಂದೀಪಕುಮಾರ ಹಾಗೂ ನೀರಜ್ ಕುಮಾರ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಅವರ ವಿರುದ್ಧ ತನಿಖೆ ನಡೆಸುವಂತೆ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಬ್ಯಾಂಕ್ ವಹಿವಾಟು ಪರಿಶೀಲಿಸುತ್ತಿದ್ದಾರೆ.
ಆ. 12ರಂದು ಅಪರಿಚಿತ ವ್ಯಕ್ತಿಯೊಬ್ಬ ಗುಂಡಪ್ಪ ಅವರಿಗೆ ಕರೆ ಮಾಡಿ, ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ನರೇಶ್ ಗೋಯಿಲ್ ಮನಿ ಲ್ಯಾಂಡಿಂಗ್ ಕೇಸಿನಲ್ಲಿ ನೀವು ಭಾಗಿಯಾಗಿದ್ದಿರಿ.
ಜಪ್ತಿ ಮಾಡಲಾದ ವಸ್ತುಗಳಲ್ಲಿ ನಿಮ್ಮ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಗಳು ಸಿಕ್ಕಿವೆ. ಸಾಕಷ್ಟು ಅವ್ಯವಹಾರ ನಡೆಸಿದ್ದೀರಿ ಎಂದು ಹೇಳಿ ಡಿಜಿಟಲ್ ಅರೆಸ್ಟ್ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹಂತ ಹಂತವಾಗಿ ಹಣ ವಂಚಿಸಲಾಗಿದೆ ಎಂದು ವಕೀಲರು ದೂರಿನಲ್ಲಿ ತಿಳಿಸಿದ್ದಾರೆ.