ನವದೆಹಲಿ: 'ವಿನಾಶಕಾರಿ ಮತ್ತು ಭಯೋತ್ಪಾದನೆ ಪಡೆಗಳು ಕೆಲ ಕಾಲ ಮಾತ್ರ ಪ್ರಾಬಲ್ಯ ಸಾಧಿಸಬಹುದು. ಆದರೆ, ಎಂದಿಗೂ ಶಾಶ್ವತವಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ಪ್ರಸಿದ್ಧ ಸೋಮನಾಥ ದೇವಸ್ಥಾನದ ವಿವಿಧ ಯೋಜನೆಗಳಿಗೆ ವರ್ಚುವಲ್ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, 'ವಿನಾಶಕಾರಿ ಪಡೆಗಳಿಂದ ಮತ್ತು ಭಯೋತ್ಪಾದನೆ ಸಿದ್ಧಾಂತದಿಂದ ಮಾನವೀಯತೆಯನ್ನು ಎಂದಿಗೂ ಹತ್ತಿಕ್ಕಲು ಸಾಧ್ಯವಿಲ್ಲ. ಅದೇ ರೀತಿ, ಭಯೋತ್ಪಾದನೆ ಆಧಾರದ ಮೇಲೆ ಸ್ಥಾಪಿಸಿದ ಸಾಮ್ರಾಜ್ಯಗಳೂ ಶಾಶ್ವತವಾಗಿ ಉಳಿಯಲು ಸಾಧ್ಯವೇ ಇಲ್ಲ' ಎಂದು ಪ್ರತಿಪಾದಿಸಿದ್ದಾರೆ.
'ಸೋಮನಾಥ ದೇವಾಲಯವನ್ನು ಹಲವು ಬಾರಿ ನಾಶಗೊಳಿಸಲಾಗಿತ್ತು. ಇಲ್ಲಿನ ವಿಗ್ರಹಗಳನ್ನು ವಿರೂಪಗೊಳಿಸಲಾಗಿತ್ತು. ಆದರೆ, ದೇವಾಲಯ ಮತ್ತೆ ತನ್ನ ವೈಭವ ಪಡೆದುಕೊಂಡಿದೆ. ಇದು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ' ಎಂದು ಹೇಳಿದ್ದಾರೆ.