Select Your Language

Notifications

webdunia
webdunia
webdunia
webdunia

ಸಿಂಹಾದ್ರಿ ಅಪ್ಪಣ್ಣಸ್ವಾಮಿ ದೇವಸ್ಥಾನದಲ್ಲಿ ಚಂದನೋತ್ಸವಂ ವೇಳೆ ಗೋಡೆ ಕುಸಿದು ಎಂಟು ಭಕ್ತರು ಸಾವು

Simhadri Appannaswamy Temple, Chandanotsavam, devotees die after wall collapses

Sampriya

ಅಮರಾವತಿ , ಬುಧವಾರ, 30 ಏಪ್ರಿಲ್ 2025 (10:04 IST)
Photo Courtesy X
ಅಮರಾವತಿ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಸಿಂಹಾಚಲಂನಲ್ಲಿ ಸಿಂಹಾದ್ರಿ ಅಪ್ಪಣ್ಣಸ್ವಾಮಿ ದೇವಸ್ಥಾನದಲ್ಲಿ ಚಂದನೋತ್ಸವಂ ವೇಳೆ  ಗೋಡೆ ಕುಸಿದು ಎಂಟು ಮಂದಿ ಭಕ್ತರು ಮೃತಪಟ್ಟಿದ್ದಾರೆ.

ಇಂದು ಬೆಳಗಿನ ಜಾವ 2:30 ರಿಂದ 3:30ರವರೆಗೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಭಾರೀ ಗಾಳಿ ಹಾಗೂ ದೇವಸ್ಥಾನದ ಬಳಿ ಹರಿಯುತ್ತಿದ್ದ ನೀರಿನ ಹರಿವು ಈ ಘಟನೆಗೆ ಕಾರಣ ಎನ್ನಲಾಗಿದೆ. ಗೋಡೆಯು ಮಣ್ಣಿನ ಹೊದಿಕೆಯನ್ನು ಹೊಂದಿದ್ದು, ಮಣ್ಣು ಸಡಿಲಗೊಂಡಿರಬಹುದು, ಜೊತೆಗೆ ಭಾರೀ ಗಾಳಿಯಿಂದಾಗಿ ಪೆಂಡಾಲ್‌ಗಳು ನೆಲಕ್ಕುರುಳಿದವು. ಇನ್ನೂ 20 ದಿನಗಳ ಹಿಂದೆಯಷ್ಟೇ ಈ ಗೋಡೆಯನ್ನು ನಿರ್ಮಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ದೇವಸ್ಥಾನದಲ್ಲಿ ನಡೆಯುತ್ತಿದ್ದ ಚಂದನೋತ್ಸವಂ ವೇಳೆ ಈ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ ಚಂದನೋತ್ಸವದಲ್ಲಿ ವರಾಹ ಲಕ್ಷ್ಮೀ ನರಸಿಂಹಸ್ವಾಮಿಯ ನಿಜರೂಪ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಇದೇ ವೇಳೆ ದೇವಸ್ಥಾನದಲ್ಲಿ ಇತ್ತೀಚಿಗೆ ನಿರ್ಮಿಸಲಾಗಿದ್ದ 20 ಅಡಿ ಉದ್ದದ ಹೊಸ ಗೋಡೆಯೊಂದು ಕುಸಿದಿದೆ. ಪರಿಣಾಮ ಎಂಟು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಚಂದನೋತ್ಸವಂ ಹಬ್ಬವನ್ನು ಪ್ರತಿ ವರ್ಷ ಏ.30 ರಂದು ಆಚರಿಸಲಾಗುತ್ತದೆ. ಭಕ್ತರು ವರ್ಷಪೂರ್ತಿ ಶ್ರೀಗಂಧದ ಲೇಪದಿಂದ ಮುಚ್ಚಿದ ನರಸಿಂಹ ದೇವರನ್ನು ಈ ಚಂದನೋತ್ಸವಂ ಹಬ್ಬದ ಸಂದರ್ಭದಲ್ಲಿ ನೋಡುತ್ತಾರೆ.

ಸ್ಥಳಕ್ಕೆ ತಕ್ಷಣವೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ  ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆದೌಡಾಯಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದವು. ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನಲ್ಲಿ ಸಾಮೂಹಿಕ ಹಲ್ಲೆ, ಕೊಲೆ ಪ್ರಕರಣ: ಮೃತನ ಗುರುತು ಪತ್ತೆ, 15 ಮಂದಿ ಬಂಧನ