ನವದೆಹಲಿ: ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ (ಬಿ.ಆರ್.ಗವಾಯಿ) ಅವರನ್ನು ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗವಾಯಿ ಅವರ ನೇಮಕವನ್ನು ಅನುಮೋದಿಸಿದ್ದಾರೆ.
1960ರ ನವೆಂಬರ್ 24ರಂದು ಅಮರಾವತಿಯಲ್ಲಿ ಜನಿಸಿದ ಗವಾಯಿ ಅವರು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 2003ರ ನವೆಂಬರ್ 14ರಂದು ಅಧಿಕಾರ ವಹಿಸಿಕೊಂಡರು. 2005ರ ನವೆಂಬರ್ 12ರಂದು ಅವರ ಸೇವೆಯು ಕಾಯಂ ಆಯಿತು.
ಭೂಷಣ್ ಗವಾಯಿ ಅವರು ಅವರ ತಂದೆ ದಿವಂಗತ ಆರ್.ಎಸ್. ಗವಾಯಿ ಅವರು ಬಿಹಾರ ಮತ್ತು ಕೇರಳದ ಮಾಜಿ ರಾಜ್ಯಪಾಲರು ಮತ್ತು ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರಾಗಿದ್ದರು.
ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಮೇ 14 ರಂದು ಭಾರತದ 52 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಭಾರತದ ಸಂವಿಧಾನವು ನೀಡಿರುವ ಅಧಿಕಾರದ ಅಡಿಯಲ್ಲಿ ಈ ನೇಮಕಾತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ನ್ಯಾಯಮೂರ್ತಿ ಗವಾಯಿ ಅವರಿಗೆ ಸಿಜೆಐ ಆಗಿ 6 ತಿಂಗಳಿಗೂ ಹೆಚ್ಚಿನ ಅವಧಿ ಸಿಗಲಿದ್ದು ಈ ವರ್ಷದ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ.