Publish Date: Sun, 31 Mar 2024 (14:51 IST)
Updated Date: Sun, 31 Mar 2024 (14:54 IST)
ರಾಮನಗರ: ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ವೇಳೆ ನಾನು ಅಲ್ಲೇ ಇದ್ದೆ. ಆಧುನಿಕ ತಂತ್ರಜ್ಞಾನ ಬಳಸಿ ಕಾಲಿನ ರಕ್ತನಾಳದ ಮೂಲಕ ಹೃದಯದ ಕವಾಟ ಬದಲಾವಣೆ ಮಾಡಲಾಗಿದೆ. ಮಾಹಿತಿ ಇಲ್ಲದೆ ಯಾವುದರ ಬಗ್ಗೆಯೂ ಮಾತನಾಡಬಾರದು ಎಂದು ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ಕೆಲ ದಿನಗಳ ಹಿಂದೆ ಚುನಾವಣೆ ಬಂದ್ರೆ ಸಾಕು ಕುಮಾರಸ್ವಾಮಿ ಆಸ್ಪತ್ರೆ ಸೇರ್ತಾರೆ ಎನ್ನುವ ಮೂಲಕ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಎಚ್‌ಡಿಕೆ ಹೃದಯ ಶಸ್ತ್ರಚಿಕಿತ್ಸೆ ಕುರಿತು ಅನುಮಾನ ವ್ಯಕ್ತಪಡಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಅವರು, 2007ರಲ್ಲಿ ಕುಮಾರಸ್ವಾಮಿ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿ ಕವಾಟ ಜೋಡಿಸಲಾಗಿದೆ. 2017ರಲ್ಲಿ ಎರಡನೇ ಸಲ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಮೂರನೇ ಸಲ ಆಧುನಿಕ ತಂತ್ರಜ್ಞಾನದ ಬಳಸಿ ಕಾಲಿನ ರಕ್ತನಾಳದ ಮೂಲಕ ಕವಾಟ ಬದಲಾಯಿಸಲಾಗಿದೆ ಎಂದರು.
ಬೆಂಗಳೂರಿನಲ್ಲೇ ಎಚ್‌ಡಿಕೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬಹುದಾಗಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ಒತ್ತಡ ಹೆಚ್ಚಾಗುವ ಕಾರಣಕ್ಕೆ ಚೆನ್ನೈನಲ್ಲಿ ಮಾಡಲಾಗಿದೆ ಎಂದರು.