Publish Date: Sat, 30 Mar 2024 (21:22 IST)
Updated Date: Sat, 30 Mar 2024 (21:26 IST)
ಬೆಂಗಳೂರು: ತೆರಿಗೆ ವಂಚನೆ ಮತ್ತು ಚುನಾವಣಾ ಉದ್ದೇಶಕ್ಕೆ ಹಣ ಸಂಗ್ರಹಿಸಿರುವ ಅನುಮಾನದ ಮೇಲೆ ರಾಜಕಾರಣಿಗಳ ಜತೆ ನಿಕಟವಾದ ನಂಟು ಹೊಂದಿರುವ ಬಿಲ್ಡರ್‌ಗಳ ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದು, ವಿಲ್ಸನ್ ಗಾರ್ಡನ್, ಫ್ರೇಜರ್ ಟೌನ್, ಕೆ.ಆರ್. ಪುರ ಸೇರಿದಂತೆ ಹಲವು ಕಡೆಗಳಲ್ಲಿ ಶನಿವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಬಿಲ್ಡರ್‌ಗಳ ಮನೆಗಳು, ಕಚೇರಿಗಳು ಮತ್ತು ಅವರ ನಿಕಟವರ್ತಿಗಳ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಕ್ರಮ ತಡೆಯಲು ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅದರ ಭಾಗವಾಗಿಯೇ ಈ ಕಾರ್ಯಾಚರಣೆಯೂ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.