ದೆಹಲಿ: ನಿನ್ನೆ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಪೋಟಕ್ಕೆ ಬಳಸಲಾದ ಕಾರಿನ ಬಗ್ಗೆ ಈಗ ಶಾಕಿಂಗ್ ಮಾಹಿತಿಗಳು ಹೊರ ಬೀಳುತ್ತಿವೆ. ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಈಗ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ಸ್ಪೋಟಕವಿದ್ದ ಕಾರು ಹರ್ಯಾಣದಿಂದ ಬಂದಿತ್ತು ಎನ್ನುವುದು ಖಚಿತವಾಗಿದೆ. ಆದರೆ ಹರ್ಯಾಣದಿಂದ ಇಲ್ಲಿಗೆ ಬರುವ ಸಂದರ್ಭದಲ್ಲಿ ಎಲ್ಲಿಯೂ ಭದ್ರತಾ ತಪಾಸಣೆಗೊಳಗಾಗದೇ ಹೇಗೆ ಬಂತು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಕಾರಿನ ನಂಬರ್ HR 26 C 7674 ಎಂದು ಪತ್ತೆ ಮಾಡಲಾಗಿದೆ. ಈ ಮೂಲಕ ಇದು ಹರ್ಯಾಣ ನೋಂದಣಿ ಕಾರು ಎನ್ನುವುದು ಖಚಿತವಾಗಿದೆ. ಅಲ್ಲದೆ, ಕಾರಿನ ನಂಬರ್ ಪ್ಲೇಟ್ ಅನುಸಾರ ತನಿಖೆ ನಡೆಸಿದಾಗ ಕಾರು ಮೊಹಮ್ಮದ್ ಸಲ್ಮಾನ್ ಎಂಬಾತನ ಹೆಸರಿನಲ್ಲಿ ನೋಂದಣಿಯಾಗಿರುವುದು ಖಚಿತವಾಗಿದೆ.
2014 ರಲ್ಲಿ ಐ20 ಮಾದರಿಯ ಕಾರನ್ನು ಹರ್ಯಾಣದ ಗುರುಗ್ರಾಮದ ಶಾಂತಿ ನಗರದ ವಿಳಾಸದಲ್ಲಿ ಮೊಹಮ್ಮದ್ ಸಲ್ಮಾನ್ ಎಂಬವರ ಹೆಸರಿನಲ್ಲಿ ನೋಂದಣಿ ಮಾಡಲಾಗಿತ್ತು. ಆದರೆ ಸಲ್ಮಾನ್ ನನ್ನು ವಿಚಾರಣೆಗೊಳಪಡಿಸಿದಾಗ ಈ ಕಾರನ್ನು ಒಂದೂವರೆ ವರ್ಷದ ಹಿಂದೆ ದೆಹಲಿಯ ಓಖ್ಲಾ ನಿವಾಸಿ ದೇವೇಂದ್ರ ಎಂಬವರಿಗೆ ಮಾರಾಟ ಮಾಡಿದ್ದಾಗಿ ಹೇಳಿದ್ದಾನೆ. ಹೀಗಾಗಿ ಈಗ ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಕಾರು ಮಾರಾಟವಾಗಿ ಇಷ್ಟು ಸಮಯವಾಗಿದ್ದರೂ ಮಾಲಿಕತ್ವ ಯಾಕೆ ವರ್ಗಾವಣೆಯಾಗಿಲ್ಲ ಎನ್ನುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.