Publish Date: Thu, 02 Sep 2021 (11:23 IST)
Updated Date: Thu, 02 Sep 2021 (11:27 IST)
ಬೆಂಗಳೂರು, (ಸೆ 02) : "ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದು ಹಣ ಸಂಗ್ರಹಕ್ಕೆ ಮಾತ್ರ. ಹಣ ವಸೂಲಿಗಾಗಿ ಅವರು ಆಗಾಗ್ಗೆ ರಾಜ್ಯಕ್ಕೆ ಬರುತ್ತಿದ್ದಾರೆ" ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದರು.
ಕರ್ನಾಟಕ ಬಿಜೆಪಿ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದೆ. "ಕುಮಾರಸ್ವಾಮಿ ಅವರದ್ದು ದುಡ್ಡು ವಸೂಲಿಯ ಸಂಸ್ಕೃತಿ, ಇದು ಅವರ ಪಕ್ಷದ ಸಂಸ್ಕೃತಿಯೂ ಹೌದು" ಎಂದು ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದೆ.
ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದ ಅರುಣ್ ಸಿಂಗ್, "ಹಿರಿಯರಾದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಅವರ ಮಗ ಇತರರಿಗೆ ಗೌರವ ಕೊಡುವುದನ್ನು, ಯಾವ ರೀತಿ ಮಾತನಾಡಬೇಕು ಎಂಬುದನ್ನು ತಂದೆಯನ್ನು ನೋಡಿ ಕಲಿಯಲಿ" ಎಂದು ಪ್ರತಿಕ್ರಿಯಿಸಿದ್ದರು.
"ರಾಜಕೀಯ ಪಕ್ಷಗಳ ಹಿರಿಯ ನಾಯಕರ ವಿರುದ್ಧ ಆತುರದ ಹೇಳಿಕೆಗಳನ್ನು ನೀಡುವುದನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನಿಲ್ಲಿಸಬೇಕು" ಎಂದು ಅರುಣ್ ಸಿಂಗ್ ಸಲಹೆ ನೀಡಿದ್ದರು.