ಬೆಂಗಳೂರು: ತಮಿಳುನಾಡಿನಲ್ಲಿ ಹಿಂದೂಗಳ ಪವಿತ್ರ ಕಾರ್ತಿಕ ದೀಪಕ್ಕೆ ಅನುಮತಿ ನೀಡಿದ ಜಡ್ಜ್ ವಿರುದ್ಧ ವಾಗ್ದಂಡನೆಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ನೀಡಿದ ಮನವಿ ಪತ್ರಕ್ಕೆ ಸಹಿ ಹಾಕಿದ ಮೂವರು ಕರ್ನಾಟಕದ ಕಾಂಗ್ರೆಸ್ ಸಂಸದರ ಹೆಸರನ್ನು ಬಿಜೆಪಿ ಬಹಿರಂಗಗೊಳಿಸಿದೆ.
ತಮಿಳುನಾಡಿನ ಮಧುರೈ ಸಮೀಪದ ತಿರುಪರನ್ ಕುಂಡ್ರಂ ಬೆಟ್ಟದ ಅಡುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿರುವ ಕಲ್ಲಿನ ದೀಪಸ್ತಂಬದ ಮೇಲೆ ಕಾರ್ತಿಕ ದೀಪ ಬೆಳಗಲು ಡಿಎಂಕೆ ತಕರಾರು ತೆಗೆದಿದೆ. ಇದು ಮುಸ್ಲಿಮರ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಕಾರಣ ನೀಡಿತ್ತು.
ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾ. ಸ್ವಾಮಿನಾಥನ್ ನಿರ್ಬಂಧ ತೆಗೆದುಹಾಕಿದ್ದರು. ಇದೀಗ ಜಡ್ಜ್ ವಿರುದ್ಧವೇ ಡಿಎಂಕೆ ನೇತೃತ್ವದ ಸಂಸದರು ವಾಗ್ದಂಡನೆಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ಮನವಿ ಸಲ್ಲಸಿದ್ದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟದ ಎಲ್ಲಾ ಸಂಸದರೂ ಬೆಂಬಲ ನೀಡಿದ್ದಾರೆ.
ಈ ಪೈಕಿ ಕರ್ನಾಟಕದ ಮೂವರು ಸಂಸದರು ಮನವಿ ಪತ್ರಕ್ಕೆ ಸಹಿ ಹಾಕಿರುವುದಾಗಿ ಬಿಜೆಪಿ ಬಹಿರಂಗಪಡಿಸಿದೆ. ರಾಜ್ಯದ ಕಾಂಗ್ರೆಸ್ ಸಂಸದರಾದ ಪ್ರಭಾ ಮಲ್ಲಿಕಾರ್ಜುನ್, ಶ್ರೇಯಸ್ ಪಟೇಲ್ ಮತ್ತು ಕುಮಾರ್ ನಾಯಕ್ ಕೂಡಾ ಇದಕ್ಕೆ ಸಹಿ ಹಾಕಿದ್ದಾರೆ ಎಂದು ಬಿಜೆಪಿ ಬಹಿರಂಗಪಡಿಸಿದೆ. ನಾಳೆ ನಮ್ಮೂರಿನ ದೇವಾಲಯದ ದೀಪವನ್ನೂ ಕಾಂಗ್ರೆಸ್ ಆರಿಸಲಿದೆ ಎಂದು ಬಿಜೆಪಿ ಕಡು ಟೀಕೆ ಮಾಡಿದೆ.