ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಿಹಾರ ಜನತೆಗೆ ಮನವಿಯೊಂದನ್ನು ಮಾಡಿದ್ದಾರೆ.
ಬಿಹಾರದಲ್ಲಿ ಎರಡು ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಇಂದು ಮೊದಲ ಹಂತದ ಮತದಾನ ಆರಂಭವಾಗಿದ್ದು ಬೆಳಿಗ್ಗೆಯಿಂದಲೇ ಜನ ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಬಹುತೇಕ ರಾಜಕೀಯ ನಾಯಕರೂ ಮತ ಚಲಾಯಿಸುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಇಂದು ಬಿಹಾರದಲ್ಲಿ ಪ್ರಜಾಪ್ರಭುತ್ವ ಆಚರಣೆಯ ಮೊದಲ ಹಂತವಾಗಿದೆ. ಈ ಹಂತದಲ್ಲಿ ಜನತೆ ಉತ್ಸಾಹದಿಂದ ಮತ ಚಲಾಯಿಸುವಂತೆ ಮನವಿ ಮಾಡುತ್ತೇನೆ. ಇದೇ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ನನ್ನ ಯುವ ಮಿತ್ರರಿಗೆ ಅಭಿನಂದನೆಗಳು ಎಂದಿದ್ದಾರೆ.
ಇನ್ನು ಮತ ಚಲಾವಣೆ ಬಳಿಕ ಮಾತನಾಡಿರುವ ಇಂಡಿಯಾ ಒಕ್ಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ನವಂಬರ್ 14 ರಂದು ಹೊಸ ಸರ್ಕಾರ ರಚನೆಯಾಗುವುದು ಪಕ್ಕಾ ಎಂದಿದ್ದಾರೆ. ಇಂದು ಬೆಳಿಗ್ಗೆಯೇ ತಮ್ಮ ಮತಗಟ್ಟೆಗೆ ಬಂದು ಅವರು ಮತ ಚಲಾಯಿಸಿದ್ದಾರೆ.