ಮುಂಬೈ: ಭೂಗತ ಪಾತಕಿ ಛೋಟಾ ರಾಜನ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಮುಂಬೈ ಹೈಕೋರ್ಟ್ ಬುಧವಾರ ಅಮಾನತು ಮಾಡಿದೆ. ಜೊತೆಗೆ ಆತನಿಗೆ ಜಾಮೀನು ಮಂಜೂರು ಮಾಡಿದೆ.
2001ರಲ್ಲಿ ನಡೆದಿದ್ದ ಹೋಟೆಲ್ ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಭೂಗತ ಪಾತಕಿ ಛೋಟಾ ರಾಜನ್‌ಗೆ ಬಾಂಬ್ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.
ವಿಶೇಷ ಮೋಕಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಛೋಟಾ ರಾಜನ್ ಸಲ್ಲಿಸಿರುವ ಮೇಲ್ಮನವಿ ತೀರ್ಮಾನವಾಗುವವರೆಗೂ, ಆತನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವ ನ್ಯಾ. ರೇವತಿ ಮೋಹಿತೆ-ಡೇರೆ ಹಾಗೂ ಪೃಥ್ವಿರಾಜ್ ಚವಾಣ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು, ಜಾಮೀನನ್ನೂ ಮಂಜೂರು ಮಾಡಿದೆ.
ಮೇ 30, 2024ರಂದು ವಿಶೇಷ ಮೋಕಾ ನ್ಯಾಯಾಲಯವು ಛೋಟಾ ರಾಜನ್ ಹಾಗೂ ಮತ್ತಿತರರನ್ನು ಅಪರಾಧಿಗಳು ಎಂದು ಘೋಷಿಸಿತ್ತು ಹಾಗೂ ಛೋಟಾ ರಾಜನ್ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಎರಡನೆ ಪ್ರಕರಣ ಇದಾಗಿದ್ದು, 2011ರಲ್ಲಿ ನಡೆದಿದ್ದ ಪತ್ರಕರ್ತ ಜ್ಯೋತಿರ್ಮೊಯ್ ಡೇ ಹತ್ಯೆ ಪ್ರಕರಣದಲ್ಲಿ ಆತ ಸೆರೆವಾಸ ಅನುಭವಿಸುತ್ತಿದ್ದಾನೆ.