Publish Date: Tue, 13 Oct 2026 (17:18 IST)
Updated Date: Tue, 13 Oct 2026 (17:18 IST)
ಭಾಗಲಪುರ: ಬಿಹಾರದ ಭಾಗಲಪುರರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದ ಕಳ್ಳನೊಬ್ಬ ಪ್ರಯಾಣಿಕರ ಕೈಗೆ ಸಿಕ್ಕಿಹಾಕಿಕೊಂಡ ರೋಚಕ ಘಟನೆ ವರದಿಯಾಗಿದೆ. ಶಿವನಾರಾಯಣಪುರ ರೈಲು ನಿಲ್ದಾಣದಲ್ಲಿ ನಡೆದ ಈ ಘಟನೆಯಲ್ಲಿ, ಕಳ್ಳನ ಕೈಯನ್ನು ಬಿಡದೆ ಪ್ರಯಾಣಿಕರು ರೈಲಿನೊಂದಿಗೆ ಸಾಕಷ್ಟು ದೂರದವರೆಗೆ ಎಳೆದುಕೊಂಡು ಹೋಗಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಭಾಗಲಪುರದ ಶಿವನಾರಾಯಣಪುರ ರೈಲು ನಿಲ್ದಾಣದಿಂದ ರೈಲು ಹೊರಡುವ ವೇಳೆ, ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಫೋನ್ ಬಳಕೆಯಲ್ಲಿರುವಾಗ ಹಳಿಯ ಪಕ್ಕದಲ್ಲಿದ್ದ ಖದೀಮರ ಗುಂಪು ಕಿಟಕಿಯ ಮೂಲಕ ಮೊಬೈಲ್ ಕಿತ್ತುಕೊಳ್ಳಲು ಹೊಂಚುಹಾಕಿದೆ. ಕಳ್ಳನು ಮೊಬೈಲ್ ಎಳೆದುಕೊಳ್ಳುವಷ್ಟರಲ್ಲಿ ಎಚ್ಚೆತ್ತ ಪ್ರಯಾಣಿಕರು ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಅಷ್ಟರಲ್ಲಿ ರೈಲು ಚಲಿಸಲು ಆರಂಭಿಸಿದ್ದರೂ ಪ್ರಯಾಣಿಕರು ಕಳ್ಳನ ಕೈಯನ್ನು ಬಿಟ್ಟಿಲ್ಲ.
ಪ್ಲಾಟ್ಫಾರ್ಮ್ ಅಂತ್ಯದವರೆಗೆ ಎಳೆದುಕೊಂಡು ಹೋದ ಪ್ರಯಾಣಿಕರು
ಚಲಿಸುತ್ತಿದ್ದ ರೈಲಿನ ಕಿಟಕಿಯಿಂದಲೇ ಕಳ್ಳನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಪ್ರಯಾಣಿಕರು, ಆತನನ್ನು ಪ್ಲಾಟ್ಫಾರ್ಮ್ನ ಕೊನೆಯವರೆಗೂ ಹಳಿಯ ಉದ್ದಕ್ಕೂ ಎಳೆದುಕೊಂಡು ಹೋಗಿದ್ದಾರೆ. ಈ ದೃಶ್ಯವನ್ನು ಕಂಡ ಇತರ ಪ್ರಯಾಣಿಕರು ಹಾಗೂ ಸ್ಥಳದಲ್ಲಿದ್ದವರು ಬೆರಗಾಗಿದ್ದಾರೆ. ಪ್ಲಾಟ್ಫಾರ್ಮ್ನ ತುದಿಗೆ ಬಂದಾಗ ಕಳ್ಳನ ಕೈ ಜಾರಿ ಕೆಳಗೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ.
ಭದ್ರತಾ ಸಿಬ್ಬಂದಿಯಿಂದ ಕಳ್ಳನ ಬಂಧನ
ರೈಲು ನಿಲ್ದಾಣದಲ್ಲಿ ಗಾಯಗೊಂಡು ಬಿದ್ದಿದ್ದ ಕಳ್ಳನನ್ನು ಸ್ಥಳದಲ್ಲಿದ್ದ ರೈಲ್ವೆ ಭದ್ರತಾ ಸಿಬ್ಬಂದಿ ಹಾಗೂ ಜಿಆರ್ಪಿ (GRP) ಪೊಲೀಸರು ತಕ್ಷಣವೇ ವಶಕ್ಕೆ ಪಡೆದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಲಿಸುತ್ತಿದ್ದ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ದರೋಡೆಕೋರರ ವಿರುದ್ಧ ಪ್ರಯಾಣಿಕರೇ ದಿಟ್ಟ ಹೆಜ್ಜೆ ಇಟ್ಟು ಆತನನ್ನು ಹಿಡಿದುಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ