Publish Date: Tue, 30 Jun 2026 (16:38 IST)
Updated Date: Tue, 30 Jun 2026 (16:43 IST)
ಭೀಲ್ವಾರಾ: ರಾಜಸ್ಥಾನದ ಭೀಲ್ವಾರಾ ಜಿಲ್ಲೆಯ ಕರೇಡಾ ಪಟ್ಟಣದಲ್ಲಿ ಸೋಮವಾರ ಮಧ್ಯರಾತ್ರಿ ವಿಭಿನ್ನ ಶೈಲಿಯ ಕಳ್ಳತನ ನಡೆದಿದೆ. ಕಳ್ಳರು ತಮ್ಮ ಗುರುತು ಸಿಗದಂತೆ ಮಾಡಲು ಅಳವಡಿಸಿಕೊಂಡ ಐಡಿಯಾ ಈಗ ಪೊಲೀಸ್ ಇಲಾಖೆ ಮಾತ್ರವಲ್ಲದೆ ಸಾರ್ವಜನಿಕರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ. ಇಲ್ಲಿನ ಮುಖ್ಯ ಬಸ್ ನಿಲ್ದಾಣದ ಬಳಿ ಇರುವ ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರ ಗ್ಯಾಂಗ್, ಸುಮಾರು 5 ಲಕ್ಷ ರೂಪಾಯಿ ಮೌಲ್ಯದ 35 ರಿಂದ 40 ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಕದ್ದು ಮುಚ್ಚಿ ಪರಾರಿಯಾಗಿದೆ. ಕಳ್ಳರಲ್ಲೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ಧರಿಸಿ ಈ ಕೃತ್ಯ ಎಸಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂಗಡಿ ಮಾಲೀಕ ಲಕ್ಷ್ಮಣ್ ಸೇನ್ ಅವರು ಮಂಗಳವಾರ ಬೆಳಗ್ಗೆ ಎಂದಿನಂತೆ ತಮ್ಮ ಮೊಬೈಲ್ ಅಂಗಡಿಯನ್ನು ತೆರೆದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಅಂಗಡಿಯ ಒಳಗೆ ಬೆಲೆಬಾಳುವ ಮೊಬೈಲ್ ಬಾಕ್ಸ್‌ಗಳು ಖಾಲಿಯಾಗಿ ನೆಲದ ಮೇಲೆ ಬಿದ್ದಿದ್ದವು. ತಕ್ಷಣವೇ ಅವರು ಕರೇಡಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕರೇಡಾ ಠಾಣಾಧಿಕಾರಿ ಪೂರಣ್ಮಲ್ ಮೀನಾ ನೇತೃತ್ವದ ಪೊಲೀಸ್ ತಂಡ ಪರಿಶೀಲನೆ ನಡೆಸಿದಾಗ, ಕಳ್ಳರು ಅಂಗಡಿಯ ಮೇಲ್ಛಾವಣಿಯ ಮೆಟ್ಟಿಲ ಬೀಗವನ್ನು ಕತ್ತರಿಸಿ ಒಳನುಗ್ಗಿರುವುದು ಪತ್ತೆಯಾಗಿದೆ.
ಪೊಲೀಸರು ತನಿಖೆಯ ಭಾಗವಾಗಿ ಅಂಗಡಿಯ ಒಳಗಿನ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್‌ಗಳನ್ನು ಪರಿಶೀಲಿಸಿದಾಗ ಅಸಲಿ ಕಥೆ ಬಯಲಾಗಿದೆ. ವಿಡಿಯೋದಲ್ಲಿ ಕಳ್ಳನೊಬ್ಬ ಕೈಯಲ್ಲಿ ಕಟರ್ ಹಿಡಿದು ಓಡಾಡುತ್ತಿರುವುದು ಕಂಡಿದೆ. ತನ್ನ ಮುಖ ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ಆತ ಪ್ರಧಾನಿ ನರೇಂದ್ರ ಮೋದಿ ಅವರ ಮುಖದ ತದ್ರೂಪು ಮಾಸ್ಕ್ ಧರಿಸಿದ್ದ.ಇಡೀ ಕಳ್ಳತನದ ಅವಧಿಯಲ್ಲಿ ಆತ ಆ ಮುಖವಾಡವನ್ನು ಧರಿಸಿಯೇ ಕೃತ್ಯ ಎಸಗಿದ್ದಾನೆ.
ಇದೇ ಕಳ್ಳರ ಗ್ಯಾಂಗ್ ಅದೇ ರಾತ್ರಿ ಕರೇಡಾದ 'ಬೀಜ್ ಗೋದಾಮ್ ಚೌರಸ್ತಾ'ದಲ್ಲಿರುವ 'ಸಾವರಿಯಾ ಮೊಬೈಲ್' ಎಂಬ ಮತ್ತೊಂದು ಅಂಗಡಿಯ ಶಟರ್ ಮುರಿಯಲು ಯತ್ನಿಸಿದೆ. ಅಲ್ಲೂ ಸಹ ಇದೇ ಮೋದಿ ಮಾಸ್ಕ್ ಧರಿಸಿದ ಖದೀಮ ಶಟರ್ ಬೀಗ ಮುರಿಯಲು ಯತ್ನಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಅಲ್ಲಿ ಕಳ್ಳತನ ಮಾಡಲು ಸಾಧ್ಯವಾಗಿಲ್ಲ.
ಸದ್ಯ ಪೊಲೀಸರು ಸಂತ್ರಸ್ತ ಅಂಗಡಿ ಮಾಲೀಕನ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಈ "ಮುಖವಾಡಧಾರಿ" ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ