Publish Date: Tue, 30 Jun 2026 (14:24 IST)
Updated Date: Tue, 30 Jun 2026 (14:27 IST)
ಭೋಪಾಲ್: ಪುಣೆಯ ಲೋಹಗಢ್ ಕೋಟೆಯಿಂದ ತಳ್ಳಿ ಅತ್ಯಂತ ಕ್ರೂರವಾಗಿ ಕೊಲೆಗೀಡಾಗಿದ್ದ 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರ ಸಾವನ್ನು ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಿದ್ದ ದಂತವೈದ್ಯೆ ಡಾ. ಮುಸ್ಕಾನ್ ಸೋನಿ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯನ್ನು ತೀವ್ರವಾಗಿ ಪರಿಗಣಿಸಿರುವ 'ಆಲ್ ಇಂಡಿಯಾ ಡೆಂಟಲ್ ಸ್ಟೂಡೆಂಟ್ಸ್ ಅಂಡ್ ಸರ್ಜನ್ಸ್ ಅಸೋಸಿಯೇಷನ್' (AIDSA) ಮುಸ್ಕಾನ್ ಸೋನಿ ಅವರನ್ನು ಸಂಘಟನೆಯಿಂದ 5 ವರ್ಷಗಳ ಕಾಲ ಅಮಾನತುಗೊಳಿಸಿದೆ.
ಜೂನ್ 18 ರಂದು ಪುಣೆಯ ಲೋಹಗಢ್ ಕೋಟೆಯಲ್ಲಿ ಕೇತನ್ ಅಗರ್ವಾಲ್ ಅವರನ್ನು ಅವರ ನಿಶ್ಚಿತಾರ್ಥವಾಗಿದ್ದ ಯುವತಿ ಹಾಗೂ ಆಕೆಯ ಪ್ರೇಮಿ ಸೇರಿ ಮೇಲಿಂದ ತಳ್ಳಿ ಕೊಲೆ ಮಾಡಿದ್ದರು. ಈ ಆಘಾತಕಾರಿ ಘಟನೆಯ ನಂತರ, ಡಾ. ಮುಸ್ಕಾನ್ ಸೋನಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು, "ಕೇತನ್ ಬೋಳು ತಲೆಯವರಾಗಿದ್ದರು, ಆ ವಿಷಯವನ್ನು ಮುಚ್ಚಿಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಾಗಾಗಿ ಅವರಿಗೆ ಈ ಶಿಕ್ಷೆ ಸರಿಯಾಗಿಯೇ ಆಗಿದೆ, ಅವರು ಅದಕ್ಕೆ ಅರ್ಹರು" ಎಂಬರ್ಥದಲ್ಲಿ ಅತ್ಯಂತ ಅಮಾನವೀಯವಾಗಿ ಮಾತನಾಡಿದ್ದರು.
ಮುಸ್ಕಾನ್ ಸೋನಿ ಅವರ ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಒಬ್ಬ ವೈದ್ಯಕೀಯ ವೃತ್ತಿಯಲ್ಲಿರುವ ಮಹಿಳೆ, ಕೊಲೆಯಾದ ಯುವಕನ ದೈಹಿಕ ರೂಪವನ್ನು (ಬೋಳು ತಲೆ) ನೋಡಿ ಕೊಲೆಯನ್ನು ಸಮರ್ಥಿಸಿಕೊಳ್ಳುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದರು.
ಬೆಳೆಯುತ್ತಿದ್ದ ಸಾರ್ವಜನಿಕ ಆಕ್ರೋಶವನ್ನು ಗಮನಿಸಿದ ಎಐಡಿಎಸ್ಎ (AIDSA) ಮಧ್ಯಪ್ರದೇಶ ಘಟಕವು ತಕ್ಷಣವೇ ಆದೇಶ ಹೊರಡಿಸಿ, ಮುಸ್ಕಾನ್ ಸೋನಿ ಅವರನ್ನು ಮಧ್ಯಪ್ರದೇಶ ಘಟಕದ ಖಜಾಂಚಿ ಹುದ್ದೆಯಿಂದ ಹಾಗೂ ಸಂಘಟನೆಯ ಪ್ರಾಥಮಿಕ ಸದಸ್ಯತ್ವದಿಂದ 5 ವರ್ಷಗಳ ಕಾಲ ಅಮಾನತುಗೊಳಿಸಿದೆ.
"ಮೃತ ಕೇತನ್ ಅಗರ್ವಾಲ್ ಅವರ ಬಗ್ಗೆ ಮುಸ್ಕಾನ್ ಸೋನಿ ಮಾಡಿರುವ ಅತ್ಯಂತ ಆಕ್ಷೇಪಾರ್ಹ, ಅವಹೇಳನಕಾರಿ ಮತ್ತು ಗೌರವ ರಹಿತ ಕಮೆಂಟ್‌ಗಳು ನಮ್ಮ ಸಂಘಟನೆಯ ಸಂವಿಧಾನ, ನಡಾವಳಿ ಮತ್ತು ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿವೆ. ಹೀಗಾಗಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ," ಎಂದು ಸಂಘಟನೆ ತಿಳಿಸಿದೆ.
ಸಾರ್ವಜನಿಕವಾಗಿ ತೀವ್ರ ಟೀಕೆಗೆ ಒಳಗಾಗಿ, ವೃತ್ತಿಪರ ಸಂಘಟನೆಯಿಂದ ಅಮಾನತುಗೊಂಡ ನಂತರ ಮುಸ್ಕಾನ್ ಸೋನಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದಾರೆ. ಆದರೆ, "ನನ್ನ ಮನಸ್ಸಿನಲ್ಲಿದ್ದ ಪುರುಷರ ಮೇಲಿನ ದ್ವೇಷ ತಟ್ಟನೆ ಹೊರಬಂತು" ಎಂದು ಅವರು ಹೇಳಿರುವುದು ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ