ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವು ಪ್ರಕರಣದಲ್ಲಿ ಇದೀಗ ಪ್ರಯೋಗಾಲಯದ ವರದಿ ಬಂದಿದ್ದು, ಸಾವಿಗೆ ಗಳಲೆ ರೋಗ (ಇಂಡೀಡ್ ಹ್ಯೂಮರೈಸ್ಟಿಕ್ ಸೆಪ್ಟೀಸಿಮಿಯಾ– ಎಚ್.ಎಸ್) ಕಾರಣ ದೃಢಪಟ್ಟಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್ ತಿಳಿಸಿದ್ದಾರೆ.
ನವೆಂಬರ್ 13ರಂದು ಎಂಟು ಕೃಷ್ಣಮೃಗಗಳು ಸಾವನ್ನಪ್ಪಿದ ಬಳಿಕ ಈವರೆಗೆ 31 ಕೃಷ್ಣಮೃಗಗಳು ಸತ್ತಿವೆ. ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಸುದ್ದಿಗೆ ಕಾರಣವಾಗಿದೆ.
ಇನ್ನೂ ಈ ಮೃಗಾಲಯದಲ್ಲಿದ್ದ 7 ಕೃಷ್ಣಮೃಗಗಳಲ್ಲೂ ಸೋಂಕು ದೃಢಪಟ್ಟಿದ್ದು, ಅವು ಚಿಕಿತ್ಸೆಗೆ ಸ್ಪಂದಿಸುತ್ತಿವೆ. ಆಹಾರ ತಿನ್ನುತ್ತಿವೆ. 36 ಗಂಟೆಗಳಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕೂಡ ಮಂಗಳವಾರ ಮೃಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.