ಮುಂಬೈ: ತಮ್ಮ ಗ್ರಾಹಕರನ್ನು ಸಂಪರ್ಕ ಹೆಚ್ಚಿಸುವ ನಿಟ್ಟಿನಲ್ಲಿ ಅಲ್ಲಿನ ಸ್ಥಳೀಯ ಭಾಷೆ ಶಾಖೆಗಳ ಸಿಬ್ಬಂದಿಗೆ ಸ್ಥಳೀಯ ಭಾಷೆ ತಿಳಿದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗ್ರಹಿಸಿದ್ದಾರೆ.
ಎಸ್‌ಬಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾಷೆಯ ವಿಷಯವಾಗಿ ಗ್ರಾಹಕರೊಂದಿಗಿನ ಸಂವಹನ ಕ್ಷೀಣಿಸುತ್ತಿರುವುದರಿಂದ ಕ್ರೆಡಿಟ್ ಮಾಹಿತಿ ಕಂಪನಿಗಳ ಮೇಲೆ ಅವಲಂಬನೆ ಹೆಚ್ಚಾಗಿದೆ. ಈ ಸಮಸ್ಯೆಯಿಂದಾಗಿ ಮಾಹಿತಿ ದಾಖಲಿಸುವ ಪ್ರಕ್ರಿಯೆಯೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ಸಾಲ ನೀಡಲು ನಿರಾಕರಿಸುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ ಎಂದು ಎಚ್ಚರಿಕೆ ನೀಡಿದರು.
ಇನ್ನೂ ಸ್ಥಳೀಯ ಭಾಷೆಗಳನ್ನು ಮಾತನಾಡದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆಕ್ರೋಶ ಹೊರಹಾಕುತ್ತಿರುವ ಬಗ್ಗೆ ನಿರ್ಮಲಾ ಸೀತರಾಮನ್ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲೂ ಬಹಳಷ್ಟು ಬದಲಾವಣೆಯಾಗಬೇಕಾಗಿದೆ. ಸ್ಥಳೀಯ ಭಾಷೆ ಮಾತನಾಡುವವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಹಾಗೂ ಸಿಬ್ಬಂದಿಗೆ ಸ್ಥಳೀಯ ಭಾಷೆ ಹೆಚ್ಚು ಮಾತನಾಡಲು ಒತ್ತು ನೀಡಬೇಕೆಂದರು.