ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಕೆಲವು ದಿನ ತಣ್ಣಗಾಗಿದ್ದ ಮಾಜಿ ಸಿಎಂ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಈಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಬಿಜೆಪಿ ಬ್ರಿಟಿಷರಿಗಿಂತ ಕೀಳು ಎಂದಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೇರಿತ್ತು. ಸ್ವತಃ ಕೇಜ್ರಿವಾಲ್ ಹೀನಾಯ ಸೋಲುಂಡಿದ್ದರು. ಇದಾದ ಬಳಿಕ ಅವರು ಕೆಲವು ದಿನಗಳಿಂದ ತಣ್ಣಗಾಗಿದ್ದರು.
ಇದೀಗ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಕೇಜ್ರಿವಾಲ್ ಸುದ್ದಿಯಲ್ಲಿದ್ದಾರೆ. ಬಿಜೆಪಿ ಆಡಳಿತವೆಂದರೆ ಬ್ರಿಟಿಷರ ಆಡಳಿತದಿಂದ ಕಡೆ. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಅವರ ಫೋಟೋಗಳನ್ನು ಕಿತ್ತು ಹಾಕಿತು. ನಾವು ಅಧಿಕಾರಕ್ಕೆ ಬಂದಾಗ ಈ ಫೋಟೋಗಳನ್ನು ಕಚೇರಿಯಲ್ಲಿ ಹಾಕಿದ್ದೆವು. ಆಗ ಕಾಂಗ್ರೆಸ್ ಗಾಂಧೀಜಿ ಫೋಟೋ ಯಾಕಿಲ್ಲ ಎಂದು ವಿವಾದ ಮಾಡಿತ್ತು. ಆದರೆ ಈಗ ಬಿಜೆಪಿ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಫೋಟೋ ಕಿತ್ತು ಹಾಕಿದ್ದರ ಬಗ್ಗೆ ಚಕಾರವೆತ್ತಿಲ್ಲ ಎಂದಿದ್ದಾರೆ.
ಭಗತ್ ಸಿಂಗ್ ಜೈಲಿನಲ್ಲಿದ್ದಾಗ ಅವರು ಬರೆದ ಪತ್ರಗಳನ್ನು ಅವರ ಜೊತೆಗಾರರಿಗೆ ನೀಡಲಾಗಿತ್ತು. ಆದರೆ ನಾನು ಜೈಲಿನಲ್ಲಿದ್ದಾಗ ಬರೆದ ಪತ್ರವನ್ನು ಲೆಫ್ಟಿನೆಂಟ್ ಗವರ್ನರ್ ಗೂ ತಲುಪಿಸುತ್ತಿರಲಿಲ್ಲ. ಬಿಜೆಪಿ ಆಡಳಿತ ಬ್ರಿಟಿಷರಿಗಿಂತ ಕಡೆ ಎಂದು ವಾಗ್ದಾಳಿ ನಡೆಸಿದ್ದಾರೆ.