ನವದೆಹಲಿ(ಆ.06): ಭಾರತದ ಇತಿಹಾಸದಲ್ಲಿ ಆಗಸ್ಟ್ 5 ಅತ್ಯಂತ ವಿಶೇಷ ಹಾಗೂ ಪ್ರಮುಖವಾಗಿದೆ. ಕಾರಣ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ ಮಾನ ರದ್ದು, ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಗೂ ಇದೀಗ 4 ದಶಕಗಳ ಬಳಿಕ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಹಾಕಿ ಸೇರಿದಂತೆ ಆಗಸ್ಟ್ 5 ಭಾರತೀಯರಿಗೆ ವಿಶೇಷ ದಿನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿನ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ವೇಳೆ ಆಗಸ್ಟ್ 5ರ ಮಹತ್ವ ಹೇಳಿದರು. ಇದೇ ಆಗಸ್ಟ್ 5ರಂದು ಎರಡು ವರ್ಷಗಳ ಹಿಂದೆ ಕಲಂ 370 ಅನ್ನು ರದ್ದುಗೊಳಿಸುವ ಮೂಲಕ ಏಕ್ ಭಾರತ್, ಶ್ರೇಷ್ಠ ಭಾರತ್ ಭಾವನೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲಾಯಿತು. ಆ ಮೂಲಕ ಎಲ್ಲ ಹಕ್ಕು ಮತ್ತು ಸೌಕರ್ಯಗಳು ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ಪ್ರಜೆಗೂ ಲಭ್ಯವಾಗುವಂತೆ ಮಾಡಲಾಯಿತು. ಪ್ರಧಾನಮಂತ್ರಿ ಅವರು ನೂರಾರು ವರ್ಷಗಳ ನಂತರ ಭಾರತೀಯರು ಭವ್ಯ ರಾಮಮಂದಿರ ನಿರ್ಮಾಣದತ್ತ ಮೊದಲ ಹೆಜ್ಜೆ ಇಟ್ಟಿದ್ದು ಕೂಡ ಆಗಸ್ಟ್ 5ರಂದೇ ಎಂದು ಉಲ್ಲೇಖಿಸಿದರು. ಅಯೋಧ್ಯೆಯಲ್ಲಿಂದು ರಾಮಮಂದಿರವನ್ನು ಅತ್ಯಂತ ಕ್ಷಿಪ್ರವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಇದೀಗ ಟೋಕಿಯೋ ಒಲಿಂಪಿಕ್ಸ್ನಲ್ಲಿ ಹಾಕಿ ಇಂಡಿಯಾ ಪದಕ ಗೆದ್ದುಕೊಂಡಿದೆ. ಈ ಮೂಲಕ 41 ವರ್ಷಗಳ ಬಳಿಕ ಪದಕ ಗೆದ್ದ ಸಾಧನೆ ಮಾಡಿದೆ. ಇವೆಲ್ಲವೂ ಆಗಸ್ಟ್ 5ರಂದು ನಡೆದಿದೆ ಎಂದು ಮೋದಿ ಹೇಳಿದರು. ಕ್ರೀಡಾಪಟುಗಳ ಗೋಲು ಸಿಡಿಸಿ ಪದಕ ಗೆಲ್ಲುತ್ತಿದ್ದಾರೆ. ಈ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಆದರೆ ದೇಶದಲ್ಲಿನ ಕೆಲವು ಜನರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಸ್ವಯಂ ಗೋಲು ಹೊಡೆಯುವುದರಲ್ಲಿ ತೊಡಗಿದ್ದಾರೆ ಎಂದು ಮೋದಿ, ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ವಿಪಕ್ಷಗಳನ್ನು ಟೀಕಿಸಿದರು.
ಒಲಿಂಪಿಕ್ಸ್ ಮಾತ್ರವಲ್ಲದೆ, 50 ಕೋಟಿ ಲಸಿಕೆ, ಜುಲೈ ತಿಂಗಳಲ್ಲಿ 1 ಲಕ್ಷ 16ಸಾವಿರ ರೂ, ದಾಖಲೆಯ ಜಿಎಸ್ ಟಿ ಸಂಗ್ರಹ ಆರ್ಥಿಕತೆಯಲ್ಲಿ ಹೊಸ ವೇಗವನ್ನು ನೀಡಿದೆ ಎಂದರು. ಅನಿರೀಕ್ಷಿತ ರೀತಿಯಲ್ಲಿ ಹೆಚ್ಚಾಗಿರುವ ಮಾಸಿಕ ಕೃಷಿ ರಫ್ತು ಅಂಕಿ ಅಂಶ 2ಲಕ್ಷದ 62 ಕೋಟಿಗೆ ಏರಿಕೆಯಾಗಿರುವ ಕುರಿತು ಅವರು ಮಾತನಾಡಿದರು. ಸ್ವಾತಂತ್ರ್ಯಾನಂತರ ಇದು ಅತಿ ದೊಡ್ಡ ಸಾಧನೆಯಾಗಿದ್ದು, ಇದು ಭಾರತವನ್ನು ಅಗ್ರ 10 ಕೃಷಿ ಉತ್ಪನ್ನಗಳ ರಫ್ತು ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದೆ ಎಂದರು. ಭಾರತದ ಮೊದಲ ಮೇಡ್ ಇನ್ ಇಂಡಿಯಾ ವಿಮಾನ ನೌಕೆ ವಿಕ್ರಾಂತ್, ವಿಶ್ವದ ಅತಿ ಎತ್ತರದ ಪ್ರದೇಶ ಲಡಾಖ್ ನಲ್ಲಿ ಮೋಟಾರು ವಾಹನಗಳು ಸಂಚರಿಸಬಹುದಾದ ರಸ್ತೆ ನಿರ್ಮಾಣ ಕಾರ್ಯ ಪೂರ್ಣ ಮತ್ತು ಇ-ರುಪಿ ಬಿಡುಗಡೆ ಮತ್ತಿತರ ವಿಚಾರಗಳ ಕುರಿತು ಮಾತನಾಡಿದರು.