ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ 2025ರ ಜನವರಿ ತಿಂಗಳಲ್ಲಿ ಕೋವಿಡ್ 4ನೇ ಅಲೆ ಸ್ಫೋಟಗೊಳ್ಳಲಿದೆ ಎನ್ನುವ ವಿಡಿಯೋವೊಮದು ವೈರಲ್ ಆಗುತ್ತಿದೆ. ಇದೀಗ ಪಿಟಿಐ ಫ್ಯಾಕ್ಟ್‌ಚೆಕ್ ತನಿಖೆಯಲ್ಲಿ ಈ ವಿಡಿಯೊ ನಕಲಿ ಎಂಬುದು ಗೊತ್ತಾಗಿದೆ. ಈ ವಿಡಿಯೊ 2022ರದ್ದು ಎಂದೂ ಅದು ಹೇಳಿದೆ.
ಹೊಸ ವರ್ಷ 2025ರಲ್ಲಿ ಜಾಗರೂಕರಾಗಿರಿ, ಮತ್ತೆ ಕೊರೊನಾ ಬರಲಿದೆ. ಚೀನಾದಲ್ಲಿ ಪ್ರತಿದಿನ ಸಾವಿರಾರು ಜನರು ಸಾಯುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹರಿ ಬಿಡಲಾಗಿದೆ. ಡಿಸೆಂಬರ್ 17ರಂದು ಫೇಸ್‌ಬುಕ್‌ನ ಹಲವು ಬಳಕೆದಾರರು ಹಂಚಿಕೊಂಡಿದ್ದರು. ಇತ್ತೀಚಿನ ವಿಡಿಯೊ ಎಂಬಂತೆ ಮತ್ತೆ ಕೆಲವರು ಹಂಚಿಕೊಂಡಿದ್ದರು.
ಗೂಗಲ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ಬಳಸಿಕೊಂಡು ಪಿಟಿಐ ನಡೆಸಿದ ಫ್ಯಾಕ್ಟ್ ಚೆಕ್‌ನಲ್ಲಿ ವಿಡಿಯೊಗೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬರಲಿಲ್ಲ.
ಇದಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ ಭಾರತದಲ್ಲಿ ಕೇವಲ 11 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ. 4ನೇ ಅಲೆ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.