Publish Date: Tue, 17 Jun 2025 (14:14 IST)
Updated Date: Tue, 17 Jun 2025 (14:29 IST)
ಅಹಮದಾಬಾದ್: ಇಲ್ಲಿನ ವಿಮಾನ ನಿಲ್ದಾಣದ ಸಮೀಪ ಐದು ದಿನಗಳ ಹಿಂದೆ ಸಂಭವಿಸಿದ ಭೀಕರ ವಿಮಾನ ಅಪಘಾತ ದುರಂತದಲ್ಲಿ 270 ಮಂದಿ ಜೀವಂತವಾಗಿ ಸುಟ್ಟುಕರಕಲಾಗಿದ್ದರು. ಈ ಪೈಕಿ 135 ಮಂದಿಯ ಗುರುತು ಮಾತ್ರ ಪತ್ತೆಯಾಗಿದ್ದು, ಇನ್ನೂ 135 ಮಂದಿಯ ಶವದ ಪತ್ತೆ ಕಾರ್ಯ ಚುರುಕುಗೊಂಡಿದೆ.
ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೂನ್ 12ರಂದು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು, ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಕನಿಷ್ಠ 270 ಮಂದಿ ಮೃತಪಟ್ಟಿದ್ದರು.
ಪತನಗೊಂಡ ಏರ್ ಇಂಡಿಯಾ ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಮಂದಿ ಮೃತಪಟ್ಟಿದ್ದಾರೆ. ವಿಮಾನ ಡಿಕ್ಕಿ ಹೊಡೆದ ಸ್ಥಳದಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳೂ ಸೇರಿ 29 ಮಂದಿ ಸಾವನ್ನಪ್ಪಿದ್ದಾರೆ.
ಮೃತದೇಹಗಳು ಸುಟ್ಟುಹೋಗಿದ್ದರಿಂದ ನೇರವಾಗಿ ಗುರುತು ಪತ್ತೆ ಸಾಧ್ಯವಾಗಿಲ್ಲ. ಹೀಗಾಗಿ, ಡಿಎನ್‌ಎ ಪರೀಕ್ಷೆಗಳ ಮೂಲಕ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಗುರುತು ಪತ್ತೆಯಾದ 135 ಮೃತದೇಹಗಳ ಪೈಕಿ 101 ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.
ವಿಮಾನದ ಭೀಕರ ದುರಂತಕ್ಕೆ ಬಹುತೇಕ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ ಅಥವಾ ಛಿದ್ರವಾಗಿವೆ. ಡಿಎನ್‌ಎ ಮೂಲಕ ಗುರುತು ಪತ್ತೆ ಪ್ರಕ್ರಿಯೆಗಾಗಿ 230 ತಂಡಗಳನ್ನು ರಚಿಸಲಾಗಿದೆ. ಗುರುತು ಪತ್ತೆ ಮಾಡಲಾದ ಸಂತ್ರಸ್ತರು ಗುಜರಾತ್, ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ ಮತ್ತು ದಿಯು ಮತ್ತು ದಮನ್‌ನ ವಿವಿಧ ಪ್ರದೇಶದವರಾಗಿದ್ದಾರೆ. ಇನ್ನು ಒಂದು ದಿನದಲ್ಲಿ ಎಲ್ಲ ಶವಗಳ ಗುರುತು ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.