ಮುಂಬೈ : ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡಿ ಕಳೆದ ವರ್ಷ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಬಂಪರ್ ಫಸಲು ನೀಡಿದ್ದ ಅದಾನಿ ಸಮೂಹದ ಷೇರುಗಳು ಭಾರೀ ಇಳಿಕೆ ಕಂಡಿದೆ.
ಲೆಕ್ಕಪತ್ರ ವಂಚನೆ ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿದ್ದು ಎರಡೇ ದಿನದಲ್ಲಿ 4 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ.
ವರದಿ ಪ್ರಕಟವಾದ ದಿನವೇ 46 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದ್ದ ಅದಾನಿ ಗ್ರೂಪ್ ಇಂದು ಮತ್ತಷ್ಟು ನಷ್ಟ ಅನುಭವಿಸಿದೆ. 2020 ಮಾರ್ಚ್ ಬಳಿಕ ಅದಾನಿ ಸಮೂಹವು ಎದುರಿಸಿರುವ ಅತಿ ದೊಡ್ಡ ದೈನಂದಿನ ಕುಸಿತ ಇದಾಗಿದೆ.
ಕಂಪನಿಗಳ ಮೌಲ್ಯ ಕುಸಿತವಾದ ಬೆನ್ನಲ್ಲೇ ಗೌತಮ್ ಆದಾನಿ ಅವರ ಸಂಪತ್ತು ಭಾರೀ ಇಳಿಕೆಯಾಗಿದೆ. ಫೋರ್ಬ್ಸ್ ರಿಯಲ್ ಟೈಂ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಅದಾನಿ ಈಗ 7ನೇ ಸ್ಥಾನಕ್ಕೆ ಜಾರಿದ್ದಾರೆ.