ಅಸಭ್ಯ ವರ್ತನೆ ತೋರಿದ ಆರೋಪಿಯನ್ನು ಅಬು ಸಲ್ಮಾನ್ ಎಂದು ಗುರುತಿಸಲಾಗಿದ್ದು ಈತನೀಗ ಪೊಲೀಸರ ಆತಿಥ್ಯದಲ್ಲಿದ್ದಾನೆ. ಮಹಿಳೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವಿದೇಶಿ ಮಹಿಳೆಯ ಜತೆಗೆ ಡೆಲಿವರಿ ಬಾಯ್ ಒಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ದೆಹಲಿಯ ನೋಯಿಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇರಾನ್ ಮೂಲದ 23 ವರ್ಷದ ಮಹಿಳೆ ದೆಹಲಿಯಲ್ಲಿ ವಾಸವಾಗಿದ್ದಾಳೆ. ಕೂವ್ಸ್.ಕಾಮ್‌ನಲ್ಲಿ ಆಕೆ ಶೂವನ್ನು ಬುಕ್ ಮಾಡಿದ್ದಳು. ಅದನ್ನು ಡೆಲಿವರಿ ಮಾಡಲು ಆಕೆ ವಾಸವಾಗಿರುವ ಖಾಸಗಿ ಅಪಾರ್ಟಮೆಂಟ್‌ಗೆ ತೆರಳಿದ್ದ ಸಲ್ಮಾನ್ ಪ್ಯಾಂಟ್ ಜಿಪ್ ತೆಗೆದು ಆಕೆಯ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿದ್ದ. ಆ ಸಮಯದಲ್ಲಿ ಮಹಿಳೆ ಜೋರಾಗಿ ಕಿರುಚಾಡಿದ್ದಾಳೆ. ಆಕೆಯ ಕಿರುಚಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಓಡಿ ಬಂದಿದ್ದು ಓಡಿ ಹೋಗಲು ಪ್ರಯತ್ನಿಸಿದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ದೆಹಲಿಯ ನೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.