ಅಹಮದಾಬಾದ್: ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ 10ನೇ ತರಗತಿಯ 15 ವರ್ಷದ ವಿದ್ಯಾರ್ಥಿನಿ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನವರಂಗಪುರದ ಸೋಮ್ ಲಲಿತ್ ಶಾಲೆಯಲ್ಲಿ ನಡೆದಿದ್ದು, ಆಕೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಸಾವನ್ನಪ್ಪಿದ್ದಾಳೆ.
ಈ ಘಟನೆಯು ಶಾಲೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಹಿಡಿಯಲಾಗಿದ್ದು, ಹುಡುಗಿ ಲಾಬಿಗೆ ನಡೆದುಕೊಂಡು ಹೋಗುವುದು, ಕೀಚೈನ್ ಅನ್ನು ತಿರುಗಿಸುವುದು ಮತ್ತು ಹಠಾತ್ತನೆ ರೇಲಿಂಗ್ ಮೇಲೆ ಹಾರುವುದನ್ನು ಕಾಣಬಹುದು.
ಪೋಲೀಸರ ಪ್ರಕಾರ, ಹುಡುಗಿ ಶಾಲೆಯ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಮಧ್ಯಾಹ್ನ 12.27 ಕ್ಕೆ ಜಿಗಿದಿದ್ದಾಳೆ. ಆಕೆಯ ಸ್ನೇಹಿತ ಆಕೆಯನ್ನು ತಡೆಯಲು ಯತ್ನಿಸಿದನಾದರೂ ವಿಫಲವಾಗಿದೆ ಎಂದು ವರದಿಯಾಗಿದೆ.
ಆಕೆಯ ತಲೆ, ಕೈ ಮತ್ತು ಕಾಲಿಗೆ ತೀವ್ರ ಗಾಯಗಳಾಗಿದ್ದು, ನವರಂಗಪುರದ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಐಸಿಯುಗೆ ದಾಖಲಿಸಲಾಗಿದೆ. ನಂತರ ಆಕೆಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವ ಯೋಜನೆ ಇತ್ತು ಆದರೆ ರಾತ್ರಿ 10 ಗಂಟೆ ಸುಮಾರಿಗೆ ಆಕೆ ಸಾವನ್ನಪ್ಪಿದ್ದಾಳೆ.
ಅಪಘಾತ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ನವರಂಗಪುರ ಪೊಲೀಸ್ ಇನ್ಸ್‌ಪೆಕ್ಟರ್ ಎ ಎ ದೇಸಾಯಿ ತಿಳಿಸಿದ್ದಾರೆ.
ಮೃತ ಬಾಲಕಿ ತನ್ನ ಹೆತ್ತವರು ಮತ್ತು ಒಡಹುಟ್ಟಿದವರ ಜೊತೆ ನಾರಣಪುರದಲ್ಲಿ ವಾಸವಾಗಿದ್ದಳು. ಆಕೆಯ ತಂದೆ ಗಾಂಧಿ ರಸ್ತೆಯಲ್ಲಿ ಆಪ್ಟಿಷಿಯನ್ ಅಂಗಡಿ ನಡೆಸುತ್ತಿದ್ದಾರೆ. ಕುಟುಂಬಸ್ಥರು ರಾಜಸ್ಥಾನದ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದು, ಮರಳಿದ ನಂತರ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.