ನವದೆಹಲಿ(ಆ.16): ಕೊರೋನಾ ವೈರಸ್ ಇದೀಗ 3ನೇ ಅಲೆ ಆತಂಕ ಸೃಷ್ಟಿಸಿದೆ. ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ನಿರ್ಬಂಧಗಳು ಮತ್ತೆ ಜಾರಿಯಾಗಿದೆ. ಇನ್ನು ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಲಾಕ್ಡೌನ್ ಮತ್ತೆ ಜಾರಿಯಾಗಿದೆ. ಭಾರತದಲ್ಲಿ ಮೊದಲ ಕೊರೋನಾ ಅಲೆ ವಕ್ಕರಿಸಿದಾಗ ದೇಶಕ್ಕೆ ದೇಶವೇ ಬಂದ್ ಆಗಿತ್ತು.
ಹೀಗಾಗಿ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಲ್ಲೇ ಕೆಲಸ ಮಾಡುವ( ವರ್ಕ್ ಫ್ರಮ್ ಹೋಮ್) ಅವಕಾಶ ನೀಡಿತು. ಇದೀಗ ವರ್ಕ ಫ್ರಮ್ ಹೋಮ್ನಲ್ಲಿ ಭಾರತೀಯರ ಕೆಲಸ ಹೇಗೆ ಸಾಗುತ್ತಿದೆ. ಕೆಲಸದ ಒತ್ತಡ, ಅನುಭವ ಹೇಗಿದೆ ಅನ್ನೋ ಕುರಿತು ಸಮೀಕ್ಷೆ ವರದಿ ಹೊರಬಿದ್ದಿದೆ.
ಮೈಕ್ರೋಸಾಫ್ಟ್ ಭಾರತದಲ್ಲಿ ಈ ಸಮೀಕ್ಷೆ ಮಾಡಿದೆ. ಈ ಸಮೀಕ್ಷೆಯಲ್ಲಿ ಭಾರತದ ಶೇಕಡಾ 57 ರಷ್ಟು ಮಂದಿ ವರ್ಕ್ ಫ್ರಮ್ ಹೋಮ್ನಲ್ಲಿ ಹೆಚ್ಚಿನ ಕೆಲಸ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಚೇರಿಗೆ ತೆರಳಿ ಕೆಲಸ ಮಾಡುವುದು ಸುಲಭವಾಗಿತ್ತು. ಇದೀಗ ಕೆಲಸದ ಒತ್ತಡ ಹೆಚ್ಚಿದ. ಕೆಲಸವೂ ಹೆಚ್ಚಿದೆ ಎಂದಿದ್ದಾರೆ.
ದೇಶದಲ್ಲಿನ ಶೇಕಡಾ 32ರಷ್ಟು ಮಂದಿ ವರ್ಕ್ ಫ್ರಮ್ ಹೋಮ್ನಿಂದ ದಣಿದಿದ್ದಾರೆ ಎಂದಿದ್ದಾರೆ. ವರ್ಕ್ ಫ್ರಮ್ ಹೋಮ್ ಸಹವಾಸವೇ ಬೇಡ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಮೀಕ್ಷೆ ಪ್ರಕಾರ ಹೆಚ್ಚು ಕೆಲಸ, ಒತ್ತಡದ ನಡುವೆ ಭಾರತದ 4 ರಲ್ಲಿ 3 ಮಂದಿ ವರ್ಕ್ ಫ್ರಮ್ ಹೋಮ್ಗೆ ಒಗ್ಗಿಕೊಂಡಿದ್ದಾರೆ. ಇನ್ನು 4ರಲ್ಲಿ ಒಬ್ಬ ಉದ್ಯೋಗಿ ಅಂದರೆ ಭಾರತದ ಶೇಕಡಾ 24 ರಷ್ಟು ವರ್ಕ್ ಫ್ರಮ್ ಹೋಮ್ ಮಂದಿ ಸಹದ್ಯೋಗಿಗಳ ಜೊತೆ ಕಣ್ಣೀರಿಟ್ಟಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ.
ಶೇಕಡಾ 35 ರಷ್ಟು ಮಂದಿ ವರ್ಕ್ ಫ್ರಮ್ ಹೋಮ್ನಲ್ಲಿನ ಮೀಟಿಂಗ್ ಸೇರಿದಂತೆ ಇತರ ಕೆಲಸದಲ್ಲಿ ಮುಜುಗುರ ಅನುಭವಿಸುವುದಿಲ್ಲ ಎಂದಿದ್ದಾರೆ. ಶೇಕಡಾ 37 ರಷ್ಟು ಮಂದಿ ಸಹೋದ್ಯೋಗಿಗಳನ್ನು ಅವರ ಕುಟುಂಬ ಭೇಟಿ ಮಾಡಲು ಬಯಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ.
ಶೇಕಡಾ 62 ರಷ್ಟು ವರ್ಕ್ ಫ್ರಮ್ ಹೋಮ್ ಮಂದಿ ಕಂಪನಿಯನ್ನು ದೂರಿದ್ದಾರೆ. ವರ್ಕ್ ಫ್ರಮ್ ಹೋಮ್ ನೀಡಿ ಅತೀ ಹೆಚ್ಚು ದುಡಿಸಿಕೊಳ್ಳುತ್ತಾರೆ. ಹೆಚ್ಚಿನ ಒತ್ತಡ ಹೇರುತ್ತಾರೆ ಎಂದಿದ್ದಾರೆ.ಇನ್ನು ಶೇಕಡಾ 13 ರಷ್ಟು ಮಂದಿ, ಕಂಪನಿ ನಮ್ಮನ್ನು ಕೇರ್ ಮಾಡುತ್ತಿಲ್ಲ. ಹೆಚ್ಚಿನ ಕೆಲಸ ನೀಡುತ್ತಾರೆ, ನಮ್ಮ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ ಎಂದಿದ್ದಾರೆ.
ಹೆಚ್ಚಿನ ಐಟಿ ಕಂಪನಿಗಳಿಗೆ ವರ್ಕ್ ಫ್ರಮ್ ಹೋಮ್ ಲಾಭ ತಂದುಕೊಟ್ಟಿದೆ. ಹೀಗಾಗಿ ಹಲವರಿಗೆ ವರ್ಕ್ ಫ್ರಮ್ ಹೋಮ್ ಶಾಶ್ವತ ಮಾಡಿದ್ದಾರೆ. ಇದರಿಂದ ಹೆಚ್ಚಿನ ಕೆಲಸಗಳು ಆಗುತ್ತಿವೆ ಅನ್ನೋ ವಿಚಾರ ಮಾತ್ರವಲ್ಲ, ಕಚೇರಿ ಖರ್ಚು ಸೇರಿದಂತೆ ಇತರ ಖರ್ಚುಗಳು ಕೂಡ ಕಡಿಮೆಯಾಗಿದೆ. ಹೀಗಾಗಿ ಭಾರತದಲ್ಲಿ ಹಲವು ಕಂಪನಿಗಳು ವರ್ಕ್ ಫ್ರಮ್ ಮುಂದುವರಿಸಿದೆ.