ಮುಂಬೈ : ಸಂಗೀತ ತಂಡವೊಂದರ ಸದಸ್ಯರನ್ನು ಕರೆದೊಯ್ಯುತ್ತಿದ್ದ ಬಸ್ ಪ್ರಪಾತಕ್ಕೆ ಉರುಳಿದ ಪರಿಣಾಮ 12 ಜನರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಪುಣೆಯಿಂದ ಮುಂಬೈಗೆ ಹೋಗುತ್ತಿದ್ದಾಗ ಹೆದ್ದಾರಿಯ ಶಿಂಗ್ರೋಬಾ ದೇವಸ್ಥಾನದ ಬಳಿ ಮುಂಜಾನೆ 4.50ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 27 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಜಿ ಪ್ರಭು ವಾಡಕ್ ಗ್ರೂಪ್ನ ಸದಸ್ಯರು ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮುಂಬೈನ ಗೋರೆಗಾಂವ್ಗೆ ಹಿಂತಿರುಗುತ್ತಿದ್ದರು. ಶನಿವಾರ ನಡುರಾತ್ರಿ 1 ಗಂಟೆ ಸುಮಾರಿಗೆ ಬಸ್ ಸ್ಥಳದಿಂದ ನಿರ್ಗಮಿಸಿತ್ತು. ಪ್ರಯಾಣಿಕರು ಮುಂಬೈನ ಸಿಯಾನ್ ಮತ್ತು ಗೋರೆಗಾಂವ್ನ ನೆರೆಯ ಪಾಲ್ಘರ್ ಜಿಲ್ಲೆಯ ವಿರಾರ್ಗೆ ಸೇರಿದವರು ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ತಿಳಿಸಿದ್ದಾರೆ.