ಹುಬ್ಬಳ್ಳಿ: ಈ ಮೊದಲು ವಕ್ಫ್ ಆಸ್ತಿ 1.12 ಲಕ್ಷ ಎಕರೆ ಇತ್ತು. ಆದರೆ ಈಗ ಬರೀ 23 ಸಾವಿರ ಎಕರೆ ಇದೆ ಅಷ್ಟೇ ಎಂದು ವಕ್ಫ್ ಸಚಿವ ಜಮೀರ್ ಅಹ್ಮದ್ ಲೆಕ್ಕ ಕೊಟ್ಟಿದ್ದಾರೆ.
ವಕ್ಫ್ ವಿವಾದ ಕರ್ನಾಟಕದಲ್ಲಿ ಕಾವೇರಿದ್ದು ಇಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯಕ್ಕೆ ಆಗಮಿಸಿ ವಕ್ಫ್ ವಿವಾದಕ್ಕೆ ಸಂಬಂಧಪಟ್ಟಂತೆ ರೈತರ ಅಹವಾಲುಗಳನ್ನು ಕೇಳಲಿದ್ದಾರೆ. ಇದಕ್ಕೆ ಜಮೀರ್ ಅಹ್ಮದ್ ವಿರೋಧ ವ್ಯಕ್ತಪಡಿಸಿದ್ದು, ಅವರು ಬರುವ ಅಗತ್ಯವೇ ಇರಲಿಲ್ಲ ಎಂದಿದ್ದಾರೆ.
ಇನ್ನು, ಕರ್ನಾಟಕದಲ್ಲಿ ವಕ್ಫ್ ಆಸ್ತಿ ಹೆಚ್ಚಾಗಿಲ್ಲ ಕಡಿಮೆಯಾಗಿದೆ ಎಂದೂ ಅವರು ಸಮಜಾಯಿಷಿ ನೀಡಿದ್ದಾರೆ. 1954 ರಲ್ಲಿ ಇನಾಮು ಭೂಮಿ ವಿಚಾರದಲ್ಲಿ 47 ಸಾವಿರ ಎಕರೆ ಹೋಗಿದೆ. 1973ರಲ್ಲಿ ಭೂ ಸುಧಾರಣೆ ಕಾಯ್ದೆಯಲ್ಲಿ 17 ಸಾವಿರ ಎಕರೆ ಹೋಗಿದೆ. ಈಗ ಕೇವಲ 23 ಸಾವಿರ ಎಕರೆ ನಮ್ಮ ಬಳಿಯಿದೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ಬಿಜೆಪಿಯವರು 2023 ರ ಚುನಾವಣಾ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ಒತ್ತುವರಿ ತೆರವು ಮಾಡುತ್ತೇವೆ ಎಂದೂ ಬರೆದುಕೊಂಡಿದ್ದಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದಾಗ ಅಲ್ಲಾನ ಆಸ್ತಿ ಒತ್ತುವರಿಯಾಗಿರುವುದನ್ನು ಸಹಿಸಿಕೊಳ್ಳಬಾರದು ಎಂದಿದ್ದರು. ಈಗ ಚುನಾವಣೆಗಾಗಿ ಬಿಜೆಪಿಯವರು ವಕ್ಫ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ.