Publish Date: Mon, 11 Nov 2024 (11:09 IST)
Updated Date: Mon, 11 Nov 2024 (11:13 IST)
ಚನ್ನಪಟ್ಟಣ: ಉಪಚುನಾವಣೆಯಲ್ಲಿ ರಾಜಕೀಯ ನಾಯಕರ ನಾಲಿಗೆ ಎಲುಬಿಲ್ಲದೇ ಹರಿದಾಡುತ್ತದೆ. ಇದೀಗ ಸಚಿವ ಜಮೀರ್ ಅಹ್ಮದ್ ಕೂಡಾ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ.
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಪರ ಪ್ರಚಾರ ನಡೆಸಿದ್ದ ಜಮೀರ್ ಅಹ್ಮದ್, ಎದುರಾಳಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಂದೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರನ್ನು ಕರಿಯ ಎಂದಿದ್ದಾರೆ. ಈ ಮೂಲಕ ಕುಮಾರಸ್ವಾಮಿ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದಾರೆ.
ಉರ್ದುವಿನಲ್ಲಿ ವಾಗ್ದಾಳಿ ನಡೆಸಿದ್ದ ಅವರು ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿಯವರೇ ಖತರ್ನಾಕ್ ಎಂದಿದ್ದರು. ಕಾಲಾ ಎಂದರೆ ಕಪ್ಪು ಎಂದರ್ಥ. ಕುಮಾರಸ್ವಾಮಿ ವಿರುದ್ಧ ಏಕವಚನದ ವಾಗ್ದಾಳಿ ನಡೆಸಿದ್ದ ಜಮೀರ್ ಬಿಜೆಪಿಯವರಿಗಿಂತ ಕರಿಯ ಕುಮಾರಸ್ವಾಮಿ ಡೇಂಜರ್. ಹಿಂದೆ ಹಿಜಾಬ್ ಬೇಡ ಎಂದಿದ್ದೆ. ಈಗ ಮುಸ್ಲಿಮರ ಮತ ಬೇಕಾ? ಕುಮಾರಸ್ವಾಮಿ ಬಿಜೆಪಿಗೆ ಹೋಗಿ ಮುಸ್ಲಿಮರನ್ನು ಖರೀದಿ ಮಾಡ್ತಾನಂತೆ. ಏ ಕುಮಾರಸ್ವಾಮಿ ನಿನ್ ರೇಟ್ ಹೇಳು. ಮುಸಲ್ಮಾನರು ಒಂದೊಂದು ಪೈಸಾ ಹಾಕಿ ನಿನ್ನ ಕುಟುಂಬವನ್ನೇ ಖರೀದಿ ಮಾಡ್ತಾರೆ ಎಂದು ಜಮೀರ್ ಹೇಳಿದ್ದಾರೆ.
ಅವರ ಈ ಹೇಳಿಕೆ ಜೆಡಿಎಸ್ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೇ ಜೆಡಿಎಸ್ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ವಕ್ಫ್ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡು ಕಾಂಗ್ರೆಸ್ ನವರೇ ಜಮೀರ್ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಈಗ ಕುಮಾರಸ್ವಾಮಿ ವಿರುದ್ಧ ಇಂತಹ ಪದ ಬಳಕೆ ಮಾಡಿ ವಿವಾದ ಮೈಮೇಲೆಳೆದುಕೊಂಡಿದ್ದಾರೆ.